ಐಸಿಸಿ ಏಕದಿನ ವಿಶ್ವಕಪ್ 2023 ರ ಅಂತಿಮ ಫೈನಲ್ ಪಂದ್ಯವು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ, ನವೆಂಬರ್ 19 ರಂದು ನಡೆಯಲಿದೆ. ಪಿಚ್ ಸಿದ್ಧಪಡಿಸುವುದರಿಂದ ಹಿಡಿದು ಹಲವು ವಿವಿಐಪಿಗಳು ಮತ್ತು ಸುಮಾರು 1 ಲಕ್ಷ ಪ್ರೇಕ್ಷಕರಿಗೆ ಮನೋರಂಜನೆ ನೀಡಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಟೀಮ್ ಇಂಡಿಯಾ 2003 ರ ಆಸ್ಟ್ರೇಲಿಯಾ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಕಾಂಗರೂ ಪಡೆಯನ್ನು ಮಣಿಸಿ ಫೈನಲ್‌ನಲ್ಲಿ ಭಾರತ ಗೆದ್ದಿತು ಎಂದಾದರೆ ಬಿಸಿಸಿಐಗೆ ಕೋಟಿ ಕೋಟಿ ಹಣದ ಮಳೆ ಸುರಿಯಲಿದೆ. ಭಾರತ ತಂಡ ವಿಶ್ವಕಪ್ ಗೆದ್ದರೆ ಈ ಟೂರ್ನಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದ ಫೇವರಿಟ್ ತಂಡಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯಲಿದೆ. ಇದರಿಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಕೋಟ್ಯಂತರ ರೂ. ಹರಿದು ಬರಲಿದೆ.
ವಿಶ್ವಕಪ್ ಫೈನಲ್‌ನಲ್ಲಿ ಗೆಲ್ಲುವ ತಂಡಕ್ಕೆ ಐಸಿಸಿ 40 ಲಕ್ಷ ಡಾಲರ್ (33.25 ಕೋಟಿ ರೂ.) ಬಹುಮಾನವನ್ನು ಇರಿಸಿದೆ. ಆದರೆ, ಭಾರತೀಯ ಕ್ರಿಕೆಟ್ ತಂಡ ಬಿಸಿಸಿಐ ಅಡಿಯಲ್ಲಿ ಆಡುವುದರಿಂದ ಬಹುಮಾನದ ಮೊತ್ತ ಮೊದಲು ಬಿಸಿಸಿಐ ಖಾತೆಗೆ ಬೀಳಲಿದೆ. ನಂತರ ಬಿಸಿಸಿಐ ಈ ಬಹುಮಾನದ ಹಣವನ್ನು ವಿಶ್ವಕಪ್‌ನಲ್ಲಿ ಆಡಿದ ತಂಡದ ಆಟಗಾರರು ಮತ್ತು ಕೋಚ್‌ಗಳಿಗೆ ವಿತರಿಸುತ್ತದೆ.
ಇದಿಷ್ಟೆ ಅಲ್ಲ, ಭಾರತ ವಿಶ್ವಕಪ್ ಗೆದ್ದು ಬೀಗಿತು ಎಂದಾದರೆ, ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಬೋನಸ್ ಕೂಡ ನೀಡುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಮತ್ತು ರೋಹಿತ್ ಶರ್ಮಾಗೆ ವಿಶೇಷ ಆಫರ್ ಬಿಸಿಸಿಐ ಕೊಡಬಹುದು.
ಈ ಬಾರಿ ಭಾರತವೇ ವಿಶ್ವಕಪ್‌ಗೆ ಆತಿಥ್ಯ ವಹಿಸಿದ ಕಾರಣ ಬಿಸಿಸಿಐಗೆ ಹಣ ಐಸಿಸಿ ವಿಶ್ವಕಪ್ ಪಂದ್ಯಾವಳಿಯನ್ನು ಗೆದ್ದ ಬಹುಮಾನದಿಂದ ಮಾತ್ರ ಬರುತ್ತದೆ. ನಂತರ ಪ್ರಾಯೋಜಕತ್ವದಿಂದ ಟಿಕೆಟ್ ಮಾರಾಟ ಮತ್ತು ಟಿವಿ-ಡಿಜಿಟಲ್ ಹಕ್ಕುಗಳು ಸೇರಿದಂತೆ ಇತರೆ ಮೂಲಗಳಿಂದ ಪಡೆದುಕೊಳ್ಳುತ್ತದೆ.
ಐಸಿಸಿ ಪ್ರಕಟಣೆಯ ಪ್ರಕಾರ, ವಿಶ್ವಕಪ್ ಫೈನಲ್‌ನಲ್ಲಿ ಸೋತ ತಂಡಕ್ಕೂ 20 ಲಕ್ಷ ಡಾಲರ್ (16.62 ಕೋಟಿ ರೂ.) ಸಿಗಲಿದೆ. ಸೆಮಿಫೈನಲ್‌ನಲ್ಲಿ ಸೋತ ಎರಡೂ ತಂಡಗಳು 6.65 ಕೋಟಿ ರೂ., ಗುಂಪು ಹಂತದದಲ್ಲಿ ಹೊರಬಿದ್ದ ಪ್ರತಿ ತಂಡವು 83.12 ಲಕ್ಷ ರೂಪಾಯಿಗಳನ್ನು ಪಡೆಯುತ್ತದೆ. ಹಾಗೆಯೆ ಗುಂಪು ಮಟ್ಟದ ಪಂದ್ಯವನ್ನು ಗೆಲ್ಲುವ ಪ್ರತಿ ತಂಡವು 33.25 ಲಕ್ಷ ರೂಪಾಯಿಗಳ ಬಹುಮಾನವನ್ನು ಪಡೆಯುತ್ತದೆ.