ವಿಶ್ವ ಕಪ್​ ಫೈನಲ್​ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಿ ಕ್ರೀಡಾಸ್ಫೂರ್ತಿ, ದೇಶಪ್ರೇಮ ಮೆರೆದ ಕೊಪ್ಪಳ ಜಿಲ್ಲಾಡಳಿತ! ಏನದು ವಿಶೇಷ?

ಕೊಪ್ಪಳ, ನವೆಂಬರ್​ 18: ನಾಳೆ ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ ವಿಶ್ವಕಪ್‌ ಪೈನಲ್‌ ಪಂದ್ಯ ನಡೆಯಲಿದೆ. ಭಾರತ ಮೂರನೇ ಬಾರಿ ವಿಶ್ವ ಕಪ್ ಗೆಲ್ಲಲಿ ‌ ಅಂತ ದೇಶಾದ್ಯಂತ ಕ್ರಿಕೆಟ್ ಪ್ರೇಮಿಗಳು ಅದಾಗಲೇ ಪೂಜೆ, ಪುನಸ್ಕಾರ ಮಾಡಿಸುತ್ತಿದ್ದಾರೆ. ಅನೇಕರು ಭಾರತ ತಂಡಕ್ಕೆ ಚಿಯರ್ ಅಪ್ ಮಾಡುತ್ತಿದ್ದಾರೆ. ಇನ್ನು ನಾಳಿನ ಪಂದ್ಯವನ್ನು ದೊಡ್ಡ ಪರದೆ ಮೇಲೆ ತೋರಿಸಲು ಅನೇಕ ಹೋಟೆಲ್ ಗಳಲ್ಲಿ‌ ಸಿದ್ದತೆ ಕೂಡಾ‌ ನಡೆದಿದೆ.

ಇನ್ನೂ ವಿಶೇಷ ಅನ್ನುವಂತೆ ಕೊಪ್ಪಳ ನಗರದಲ್ಲಿ ನಾಳಿನ ಪಂದ್ಯವನ್ನು ಕ್ರಿಕೆಟ್ ಪ್ರೇಮಿಗಳು ಉಚಿತವಾಗಿ ದೊಡ್ಡ ಪರದೆ ಮೇಲೆ ವೀಕ್ಷಿಸಬಹುದಾಗಿದೆ. ಇಂತಹದೊಂದು ಅವಕಾಶ ಕಲ್ಪಿಸಿರುವುದು ಕೊಪ್ಪಳ ಜಿಲ್ಲಾಡಳಿತ, ಕೊಪ್ಪಳ ಜಿಲ್ಲಾ ಪಂಚಾಯತ್​​ ಮತ್ತು ಕೊಪ್ಪಳ‌ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು.

ಕೊಪ್ಪಳ‌ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಾಳಿನ ಪಂದ್ಯದ ನೇರ ಪ್ರಸಾರ ಮಾಡಲು‌ ಇಲಾಖೆ ಸಿದ್ದತೆ ಮಾಡಿಕೊಳ್ಳುತ್ತಿದೆ. 8×12 ಅಡಿಯ ಬೃಹತ್ ಎಲ್ ಸಿ ಡಿ‌ ಸ್ಕ್ರೀನ್ ಅಳವಡಿಸಲಾಗುತ್ತಿದ್ದು, ಸೌಂಡ್ ಸಿಸ್ಟಮ್ ವ್ಯವಸ್ಥೆ ಯನ್ನು ಕೂಡಾ ಮಾಡಲಾಗುತ್ತದೆ. ಕ್ರಿಕೆಟ್ ಪ್ರೇಮಿಗಳು ಕುಳಿತು ಪಂದ್ಯ ವೀಕ್ಷಣೆ ಮಾಡಲು ಬೇಕಾದ ವ್ಯವಸ್ಥೆಯನ್ನು ‌ಇಲಾಖೆಯಿಂದಲೇ ಮಾಡಲಾಗುತ್ತಿದೆ.

ದುಡ್ಡು ಕೊಟ್ಟು ಜನ ಹೋಟೆಲ್ ಗಳಿಗೆ ಹೋಗೋ ಬದಲು, ಉಚಿತವಾಗಿ ನೋಡಿ, ನಾಳಿನ ಪಂದ್ಯವನ್ನು ವೀಕ್ಷಿಸಲಿ ಅನ್ನೋ ಉದ್ದೇಶದಿಂದ ಇಲಾಖೆ ಉಚಿತ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.

ನಾಳೆ ಮಧ್ಯಾಹ್ನ 2 ರಿಂದ ಪಂದ್ಯ ಮುಗಿಯೋವರಗೆ ಕ್ರಿಕ್ರೆಟ್ ಪ್ರೇಮಿಗಳು, ಸಾರ್ವಜನಿಕರು ಉಚಿತವಾಗಿ ನಾಳಿನ ಪಂದ್ಯವನ್ನು ದೊಡ್ಡ ಪರದೆ ಮೇಲೆ ವೀಕ್ಷಿಸಿ, ಭರಪೂರ ಆನಂದಿಸಬಹುದಾಗಿದೆ.