ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಇದು ಅನೇಕ ಭಾರೀ ಸಾಬೀತು ಕೂಡ ಆಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಪಂದ್ಯ ನಡೆದರೂ ಕೊಹ್ಲಿಯನ್ನೇ ನೋಡಲೆಂದು ಸಾವಿರಾರು ಫ್ಯಾನ್ಸ್ ಮೈದಾನಕ್ಕೆ ಆಗಮಿಸುತ್ತಾರೆ. ಇದರಲ್ಲಿ ಇತರೆ ಕ್ರಿಕೆಟಿಗರ ಕುಟುಂಬದವರೂ ಇದ್ದಾರೆ ಎಂಬುದು ಅಚ್ಚರಿ. ಇದಕ್ಕೆ ಸಾಕ್ಷಿ ಸದ್ಯ ಕೆರಿಬಿಯನ್ ನಾಡಲ್ಲಿ ಸಾಗುತ್ತಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ದ್ವಿತೀಯ ಟೆಸ್ಟ್ ಪಂದ್ಯ.
ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್, ಬ್ಯಾಟರ್ ಜೋಶ್ವಾ ಡಿ ಸಿಲ್ವಾ ಅವರ ತಾಯಿ ವಿರಾಟ್ ಕೊಹ್ಲಿ ಅವರ ದೊಡ್ಡ ಅಭಿಮಾನಿ. ಕೊಹ್ಲಿಯನ್ನು ಭೇಟಿ ಆಗಬೇಕು ಎಂಬುದು ಇವರ ಕನಸು. ಅದೀಗ ಕೊನೆಗೂ ನನಸಾಗಿದೆ. ವಿಂಡೀಸ್ ಕೀಪರ್ ತಾಯಿ ಕೊಹ್ಲಿ ಅವರನ್ನು ಭೇಟಿ ಆಗಿದ್ದು ಮಾತ್ರವಲ್ಲದೆ ಅವರನ್ನು ತಬ್ಬಿಕೊಂಡು ಮುತ್ತುಕೊಟ್ಟು ತಮ್ಮ ಆಸೆ ಪೂರೈಸಿದ್ದಾರೆ. ಈ ಖುಷಿಯ ಕ್ಷಣವನ್ನು ವ್ಯಕ್ತಪಡಿಸಲಾಗದೆ ಜೋಶ್ವಾ ತಾಯಿ ಕೊಹ್ಲಿಯ ಎದರೇ ಕಣ್ಣೀರಿಟ್ಟ ಘಟನೆ ಕೂಡ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.