ಖಾಸಗಿ ಚಾಲಕರಿಗೆ ಗುಡ್ ನ್ಯೂಸ್; ರಾಜ್ಯದಲ್ಲಿ ಶೀಘ್ರದಲ್ಲೇ ಸ್ಥಾಪನೆ ಆಗಲಿದೆ ಚಾಲಕರ ನಿಗಮ ಮಂಡಳಿ

ಬೆಂಗಳೂರು, ನ.18: ಕಳೆದ ಅನೇಕ ವರ್ಷಗಳಿಂದ ತಮಗೂ ಒಂದು ನಿಗಮ ಮಂಡಳಿ ಬೇಕು ಅಂತಾ ಸರ್ಕಾರದ ಮುಂದೆ ಖಾಸಗಿ ಚಾಲಕರು ಬಿಗಿ ಪಟ್ಟು ಹಿಡಿದಿದ್ದರು. ಜೊತೆಗೆ ಹಲವು ಬಾರಿ ರಸ್ತೆಗಿಳಿದು ಹೋರಾಟವನ್ನೂ ಮಾಡಿದ್ದರು. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಂದಿರಲಿಲ್ಲ. ಸದ್ಯ ಈಗ ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಮಂಡಳಿ ಸ್ಥಾಪನೆಗೆ ಮುಂದಾಗಿದೆ.

ಹೌದು ಮಂಡಳಿ ಸ್ಥಾಪನೆ ಸಂಬಂಧ ಈಗಾಗಲೇ ಕಾರ್ಮಿಕ ಇಲಾಖೆ ಜೊತೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ರೆಡ್ಡಿ ಮಾತುಕತೆ ಕೂಡ ನಡೆಸಿದ್ದಾರೆ. ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಮಂಡಳಿ ಸ್ಥಾಪನೆಗೆ ಮುಂದಾಗಿರೋ ಸರ್ಕಾರ ಈಗಾಗಲೇ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಹಾಗೂ ಇಲಾಖೆ ಅಧಿಕಾರಿಗಳ ಜೊತೆ ಕೂಡ ಚರ್ಚೆ ನಡೆಸಿದ್ದು, ಮಂಡಳಿ ಸ್ಥಾಪನೆ ಬಗ್ಗೆಯೂ ತೀರ್ಮಾನ ಆಗಿದೆ. ಕಾರ್ಮಿಕ ಇಲಾಖೆ ಅಡಿ ಪ್ರತ್ಯೇಕ ಮಂಡಳಿಗೆ ಚರ್ಚೆ ಆಗಿದ್ದು, ಶೀಘ್ರದಲ್ಲೇ ಕ್ಯಾಬಿನೆಟ್ ನಲ್ಲೂ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದ್ದಾರೆ.ಇನ್ನೂ ಚಾಲಕರ ನಿಗಮ ಮಂಡಳಿಯಿಂದ ಸಾಕಷ್ಟು ಅನುಕೂಲ ಆಗಲಿದೆ. ಚಾಲಕರ ಮಕ್ಕಳ ವಿದ್ಯಾಭ್ಯಾಸದಿಂದ ಹಿಡಿದು ಸಂಕಷ್ಟದ ಸಂದರ್ಭದಲ್ಲಿ ಸಾಕಷ್ಟು ಪ್ರಯೋಜನ ಆಗಲಿದೆ.

ಚಾಲಕ ನಿಗಮ ಮಂಡಳಿಯಿಂದ ಆಗುವ ಅನುಕೂಲ

  • ಕಡಿಮೆ ಬಡ್ಡಿದರದಲ್ಲಿ ಚಾಲಕರಿಗೆ ಸಾಲ ಸೌಲಭ್ಯ
  • ಚಾಲಕರಿಗೆ ಆರೋಗ್ಯ ವಿಮೆ, ಅಪಘಾತ ವಿಮೆ
  • ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡ ಪ್ರೋತ್ಸಾಹ ಧನ
  • ಹೆಣ್ಣು ಮಕ್ಕಳ ಮದುವೆಗೆ ಸಾಲ ಸೌಲಭ್ಯ
  • ಮನೆ ಖರೀದಿ ಮಾಡಲು ಸಾಲದ ಸೌಲಭ್ಯ

ಸೆಪ್ಟೆಂಬರ್ 11 ಖಾಸಗಿ ಸಾರಿಗೆ ಸಂಘಟನೆ ಒಕ್ಕೂಟ ನಡೆಸಿದ ಬೆಂಗಳೂರು ಬಂದ್ ಅಲ್ಲಿ ಪ್ರಮುಖವಾಗಿ ಚಾಲಕ ನಿಗಮ ಮಂಡಳಿ ಸ್ಥಾಪನೆ ಮಾಡಲು ಒತ್ತಾಯ ಮಾಡಲಾಗಿತ್ತು.

ಇನ್ನೂ ಚಾಲಕರ ಅಭಿವೃದ್ಧಿ ಮಂಡಳಿ ರಚನೆ ಯಾವ ರೀತಿ ಇರಬೇಕು ಅನ್ನೋದರ ಬಗ್ಗೆ ಸಾರಿಗೆ ಸಚಿವರಿಗೆ ಖಾಸಗಿ ಸಾರಿಗೆ ಸಂಘಟನೆಯ ಅಧ್ಯಕ್ಷ ನಟರಾಜ್ ಶರ್ಮಾ ಮನವಿ ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಚಾಲಕರ ನಿಗಮ ಮಂಡಳಿ ಮಾಡಬೇಕು ಅನ್ನೋದು ಚಾಲಕರ ಹಲವು ದಿನದ ಒತ್ತಾಯ, ಕೊನೆಗೂ ಈ ಒತ್ತಾಯಕ್ಕೆ ಮಣಿದು ಸರ್ಕಾರ ಚಾಲಕ ನಿಗಮ ಮಂಡಳಿ ಮುಂದಾಗಿದ್ದು ಖುಷಿಯ ಸಂಗತಿಯೇ ಆದ್ರೆ ಮಂಡಳಿ ರಚನೆಯೂ ವಿಳಂಬ ಮಾಡದೇ ಶೀಘ್ರ ರಚನೆ ಆಗಲಿ ಅನ್ನೋದೆ ಚಾಲಕರ ಹಾಗೇ ನಮ್ಮ ಆಶಯ ಕೂಡ.