ಬೆಂಗಳೂರು, ನ.17: ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆಗೆ ‘ ಸದನ ಹಾಗೂ ಸಭಾಧ್ಯಕ್ಷರ ಗೌರವ ಉಳಿಯಬೇಕಿದ್ರೆ ಕ್ಷಮೆ ಕೇಳಲಿ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿ ನಲ್ಲಿ ಮಾತನಾಡಿದ ಅವರು ‘ ಖಾದರ್ ಕಾಂಗ್ರೆಸ್ ಸ್ಪೀಕರ್ ಅಲ್ಲ, 224 ಶಾಸಕರಿಗೆ ರಕ್ಷಣೆ ಕೊಡುವವರು. ಅವರನ್ನು ಒಂದು ಧರ್ಮದ ಸೋಂಕಿಗೆ ಒಳಪಡಿಸುವುದು ಸರಿಯಲ್ಲ. ನಾಳೆ ನಿಮ್ಮ ಸಚಿವರು ಹೀಗೆ ಹೇಳಿದ್ದಾರೆ ಎಂದು ಬಿಜೆಪಿಯ 66 ಜನ ಸ್ಪೀಕರ್ಗೆ ನಾವು ಗೌರವ ಕೊಡೊಲ್ಲ ಅಂದರೆ ಏನು ಮಾಡ್ತೀರಾ?, ಇಂತಹ ಚೈಲ್ಡಿಷ್ಗಳನ್ನು ಇಟ್ಟುಕೊಂಡು ಸದನದ ಗೌರವ ಉಳಿಸಲು ಆಗುತ್ತಾ ಎಂದು ಕಿಡಿಕಾರಿದ್ದಾರೆ.
ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದ್ದೇನು?
ತೆಲಂಗಾಣ ಚುನಾವಣಾ ಅಖಾಡಕ್ಕೆ ಸಚಿವ ಜಮೀರ್ ಅಹಮ್ಮದ್ ಖಾನ್ ತೆರಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಕ್ಯಾಂಪೇನ್ನಲ್ಲಿ ತೊಡಗಿರುವ ಅವರು ‘ಇಂದು ಹೈದರಾಬಾದ್ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ರಾಜ್ಯ ಕಾಂಗ್ರೆಸ್ನಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಸ್ಥಾನಮಾನಗಳನ್ನು ಒತ್ತಿ ಒತ್ತಿ ಹೇಳಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ನಿಂದ ಬರೊಬ್ಬರಿ 9 ಮುಸ್ಲಿಮರು ಗೆದ್ದಿದ್ದಾರೆ ಎಂದರು.
ಅಷ್ಟೇ ಅಲ್ಲ, ಗೆದ್ದಿರುವ 9 ಮುಸ್ಲಿಂ ಶಾಸಕರ ಪೈಕಿ 5 ಶಾಸಕರಿಗೆ ಅಧಿಕಾರ ನೀಡಿದೆ. ನನ್ನನ್ನು ಸಚಿವನಾಗಿ ಕೂಡ ಮಾಡಿದೆ. ಅಲ್ಲದೇ ರಹೀಂ ಖಾನ್ ಸಹ ಮಂತ್ರಿ ಆಗಿದ್ದಾರೆ. ಸಲೀಂ ಅಹಮದ್ ಅವರನ್ನು ಮುಖ್ಯ ಸಚೇತಕರಾಗಿ ಮಾಡಲಾಗಿದೆ. ನಜೀರ್ ಅಹಮದ್ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ. ಇನ್ನು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಯಾವ ಮುಸ್ಲಿಂ ಸ್ಪೀಕರ್ ಆಗಿರಲಿಲ್ಲ. ಮೊದಲ ಬಾರಿಗೆ ಯು.ಟಿ ಖಾದರ್ ಅವರನ್ನು ವಿಧಾನಸಭಾ ಸ್ಪೀಕರ್ ಆಗಿ ನೇಮಿಸಲಾಗಿದೆ. ಈಗ ಬಿಜೆಪಿ ಶಾಸಕರು ಕೂಡ ನಮಸ್ಕಾರ ಸ್ಪೀಕರ್ ಸಾಬ್ ಎನ್ನುತ್ತಾರೆ ಎಂದು ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಜಮೀರ್ ಅಹಮ್ಮದ್ ಖಾನ್ ಹೇಳಿದ್ದರು.