ಬೆಂಗಳೂರು ನ.17: ದೀಪವಾಳಿ ಹಬ್ಬದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಮನೆಯನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಈ ವಿದ್ಯುತ್ ದೀಪಗಳಿಗೆ ಅನಧಿಕೃತವಾಗಿ ಕರೆಂಟ್ ಕಂಬದಿಂದ ಸಂಪರ್ಕ ಪಡೆಯಲಾಗಿತ್ತು. ಇದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿ ದಂಡ ಪಾವತಿಸಿದ್ದರು. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಚೇರಿ ಕಂಪೌಂಡ್ಗಳಿಗೆ “ಕರೆಂಟ್ ಕಳ್ಳ” ಎಂಬ ಪೋಸ್ಟರ್ ಅಂಟಿಸಿದ್ದರು. ಇದರಿಂದ ಆಕ್ರೋಶಗೊಂಡ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಪಾಲುದಾರಿಕೆಯ ಲುಲು ಮಾಲ್ನ ಆಸ್ತಿ ಮತ್ತು ಬಳಕೆ ಮಾಡಿರುವ ವಿದ್ಯುತ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ..
ಬೆಂಗಳೂರಿನಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಲುಲು ಮಾಲ್ಗೆ 24 ಎಕರೆ ಖರಾಬು ಭೂಮಿಯನ್ನ ಕಬಳಿಸಲಾಗಿದೆ. 1934ರ ಭೂಮಿಯ ದಾಖಲೆಗಳನ್ನು ಸುಟ್ಟು ಹಾಕಿ ನಾಶ ಮಾಡಿದ್ದಾರೆ. ಇವರೆಲ್ಲ ಹೇಗೆಲ್ಲಾ ದಾಖಲೆ ಬದಲಾಯಿಸಿದ್ದಾರೆಂದು ಗೊತ್ತಿದೆ. ಭೂದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿ ಭೂಮಿ ಕಬಳಿಸಿದ್ದಾರೆ. ಈ ಎಲ್ಲಾ ದಾಖಲೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ ಎಂದು ಆರೋಪ ಮಾಡಿದರು.
ಲುಲು ಮಾಲ್ ಕಾಮಗಾರಿ ವೇಳೆ, ಆರಂಭಕ್ಕೂ ಮುನ್ನ 6 ತಿಂಗಳು ಕರೆಂಟ್ ಬಿಲ್ ನೀಡಿಲ್ಲ. ಆಗ ಲುಲು ಮಾಲ್ಗೆ ಬಳಕೆ ಮಾಡಿದ್ದ ವಿದ್ಯುತ್ಗೆ ದಂಡ ಹಾಕುತ್ತೀರಾ? ಹೈ ಟೆನ್ಷನ್ ವೈರ್ ಅಂಡರ್ ಗ್ರೌಂಡ್ನಲ್ಲಿ ತೆಗೆದುಕೊಂಡು ಮಾಲ್ಗೆ ಹೋಗಿದ್ದಾರೆ. ಅದಕ್ಕೆ ಎಷ್ಟು ಹಣ ಕಟ್ಟಿದ್ದೀರಾ? ಸುಜಾತ ಟಾಕೀಸ್ ಮುಂದೆ ಇದ್ದ ಹೈ ಟೆನ್ಷನ್ ವೈರ್ ಹೇಗೆ ಅಂಡರ್ ಗ್ರೌಂಡ್ನಲ್ಲಿ ತಗೊಂಡು ಹೋದರಿ? ಜನರಿಗಾಗಿ ಮಾಡಿದ್ರಾ? ನಕಲಿ ಸೊಸೈಟಿಯನ್ನ ಅಸಲಿ ಮಾಡಿಕೊಳ್ಳೋರು ಇವರು ಎಂದು ಆರೋಪಿಸಿದರು.
ಇನ್ನು ವೈರಲ್ ಆದ ಯತೀಂದ್ರ ಸಿದ್ದರಾಮಯ್ಯ ಅವರ ಪೋನ್ ಸಂಭಾಷಣೆಯ ವಿಡಿಯೋ ಬಗ್ಗೆ ಮಾತನಾಡಿದ ಅವರು ಯಾರು ವಿವೇಕಾನಂದ, ಮಹದೇವ ಯಾರು ಅನ್ನೋದನ್ನ ಮಾಧ್ಯಮದವರು ಪತ್ತೆ ಹಚ್ಚಿದ್ದೀರಿ. ಈ ಬಗ್ಗೆ ಪ್ರಶ್ನಿಸಿದರೇ ಹೆಚ್ಡಿ ಕುಮಾರಸ್ವಾಮಿ ಹತಾಷೆಯಿಂದ ಹೀಗೆ ಮಾಡುತ್ತಿದ್ದಾರೆ ಅಂತ ಕಾಂಗ್ರೆಸ್ ಟ್ವೀಟ್ ಮಾಡಿದೆ. ಮಾನಸೀಕ ಸ್ತಿಮಿತ ಕಳೆದುಕೊಂಡಿದ್ದಾರೆ ಅಂತ ಹೇಳಿದ್ದಾರೆ. ಸದಾ ವರ್ಗಾವಣೆ ದಂಧೆಯಲ್ಲಿ ಇದ್ದೇನೆ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಅವರೇ ಕೋಆರ್ಡಿಮೇಷನ್ ಕಮಿಟಿಲಿ ನೀವು ಇದ್ದರಲ್ಲಾ, ಆಗ ಇದರ ಬಗ್ಗೆ ಪ್ರಸ್ತಾಪ ಮಾಡಿದ್ರಾ? ಕಾಫಿ, ಟೀಗೆ ಕರೆಯುತ್ತಿದ್ರಲ್ಲಾ ಆಗ ಪ್ರಸ್ತಾಪ ಮಾಡಿದ್ರಾ? ಎಂದು ಪ್ರಶ್ನಿಸಿದ್ದಾರೆ.
ಪೆನ್ಡ್ರೈವ್ ಟುಸ್ ಆಯ್ತು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ನಾನು ತೋರಿಸಿದ ತಕ್ಷಣ ಯಾಕೆ ದಯವಿಟ್ಟು ಅಣ್ಣ ಅಂತ ಕರೆ ಮಾಡಿದ್ರಿ? ನಾವು ನಿಮ್ಮ ಹಣದಲ್ಲಿ ಇದ್ದೀವಿ ಅಂದ್ರಲಾ ಯಾಕೆ ಕರೆ ಮಾಡಿದರು? ಮುಖ್ಯಮಂತ್ರಿ ಪುತ್ರನ ವಿಡಿಯೋ 7 ಗಂಟೆಗೆ ರಿಲೀಸ್ ಆಯ್ತು. ಅವರು ಪಟ್ಟಿ ರಿಲೀಸ್ ಮಾಡಿದ್ದು 3 ಗಂಟೆಗೆ. ವಿಡಿಯೋ ರಿಲೀಸ್ ಆದ ಕೂಡಲೇ ಕರೆದು ಸಿಎಸ್ರ್ ಫಂಡ್ ಅಂತ ಹೇಳಬೇಕಿತ್ತು. ಡಿಕೆ ಶಿವಕುಮಾರ್ ಹೋಗಿ ಹೇಳಿದ ಮೇಲೆ ಸಿಎಂ ಸಿಎಸ್ಆರ್ ಫಂಡ್ ಅಂತ ಹೇಳಿದ್ದಾರೆ. ಮೂರು ಗಂಟೆವರೆಗೂ ಯಾಕೆ ಹೇಳಲಿಲ್ಲ. ಇದನ್ನ ಯಾರಾದ್ರು ನಂಬುತ್ತಾರಾ? ಎಂದು ವಾಗ್ದಾಳಿ ಮಾಡಿದರು.