ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ, ಜೈ ಘೋಷದ ನಡುವೆ ಅದ್ದೂರಿಯಾಗಿ ಜರುಗಿದ ಮಲೆ ಮಹದೆಶ್ವರನ ಜಾತ್ರೆ

ಚಾಮರಾಜನಗರ ನ.15: ಹನೂರು ತಾಲೂಕಿನ ಮಲೆ ಮಹದೆಶ್ವರ ಬೆಟ್ಟ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ. ಬೆಟ್ಟದಲ್ಲಿ ನೆಲಸಿರುವ ಮಲೆ ಮಾದಪ್ಪ ಲಕ್ಷಾಂತರ ಭಕ್ತರ ಆರಾಧ್ಯ ದೈವ. ಈ ಬೆಟ್ಟದಲ್ಲಿ ವರ್ಷಕ್ಕೆ ಮೂರು ಬಾರಿ ಅಂದರೆ ಶಿವರಾತ್ರಿ, ಯುಗಾದಿ ಹಾಗೂ ದೀಪಾವಾಳಿಯಂದು ರಥೋತ್ಸವ ನಡೆಯುತ್ತದೆ. ಇದೇ ರೀತಿ ಈ ಬಾರಿಯು ಬೆಟ್ಟದಲ್ಲಿ ಮಂಗಳವಾರ ರಥೋತ್ಸವ ಲಕ್ಷಾಂತರ ಭಕ್ತರ ಜಯಘೋಷಗಳ ನಡುವೆ ಸಂಭ್ರಮ ಸಡಗರಗಳೊಂದಿಗೆ ನಡೆಯಿತು. ಲಕ್ಷಾಂತರ ಮಂದಿ ಭಕ್ತರು ಮಾದಪ್ಪನ ರಥೋತ್ಸವ ಕಣ್ತುಂಬಿಕೊಂಡಿದ್ದಾರೆ.

ಇನ್ನು ಉಘೇ ಉಘೇ ಮಾದಪ್ಪ ಎನ್ನುತ್ತಾ ಅಸಂಖ್ಯಾತ ಭಕ್ತರು ಮಾದಪ್ಪನ ತೇರು ಎಳೆದು ತಮ್ಮ ಭಕ್ತಿ ಸಮರ್ಪಿಸಿದರು. ಮಹಿಳೆಯರಂತು ಕುಣಿದು ಕುಪ್ಪಳಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು. ಹುಲಿವಾಹನ, ಬಸವವಾಹನ, ರುದ್ರಾಕ್ಷಿ ಮಂಟಪಗಳು ಮಾದಪ್ಪನ ರಥದೊಂದಿಗೆ ಸಾಗಿ ರಥೋತ್ಸವಕ್ಕೆ ಮೆರಗು ತಂದವು. ಮಾದಪ್ಪನ ಭಕ್ತರು ಉರುಳುಸೇವೆ, ಪಂಜಿನಸೇವೆ, ಮುಡಿಸೇವೆ ಮೂಲಕ ಹರಕೆ ತೀರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ರಾಜ್ಯದ ಮೂಲೆ ಮೂಲೆಗಳಿಂದ ಭಕ್ತ ಸಾಗರ ಹರಿದುಬಂದಿತ್ತು. ಕಳೆದ ಮೂರು ದಿನಗಳಿಂದ ಸಾಗರೋಪಾದಿಯಲ್ಲಿ ಹರಿದು ಬಂದ ಭಕ್ತರಿಗೆ ವಿಶೇಷ ಅನ್ನದಾಸೋಹ ಮಾಡಲಾಗಿತ್ತು. ಮೂರು ದಿನಗಳಿಂದ ಮೂರು ಲಕ್ಷಕ್ಕು ಅಧಿಕ ಲಾಡು ಪ್ರಸಾದ ಮಾರಾಟವಾಗಿದೆ. ಮಾದಪ್ಪನ ಸನ್ನಿದಿಯಲ್ಲಿ ದೀಪಾವಳಿಯ ಮೊದಲನೆ ದಿನ ಎಣ್ಣೆಮಜ್ಜನ ಸೇವೆ ನಡೆದರೆ, ಎರಡನೇ ದಿನ ಹಾಲರುವೆ ಉತ್ಸವ ನಡೆದಿತ್ತು. ಮೂರನೇ ದಿನವಾದ ಮಂಗಳವಾರ ರಥೋತ್ಸವ ನಡೆಯುವುದರೊಂದಿಗೆ ಮೂರು ದಿನಗಳ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ತೆರೆಬಿದ್ದಿತು.