ಪುರಸಭೆ ವತಿಯಿಂದ ಜಲ ದೀಪಾವಳಿ

ಅಂಕೋಲಾ: ಪ್ರಕೃತಿ ದತ್ತವಾಗಿ ನಿಸರ್ಗದಿಂದ ಸಿಗುವ ನೀರನ್ನು ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಸಹ ಅದು ದೊರೆಯುವಂತೆ ಮಾಡುವ ಜವಬ್ದಾರಿ ಮಹಿಳೆಯರ ಮೇಲಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಹೇಳಿದರು.
ಇಲ್ಲಿನ ನೀಲಂಪುರದ ವಿಠ್ಠಲಘಾಟ್ ನೀರು ಸಂಗ್ರಹಣಾ ಘಟಕದಲ್ಲಿ ಪುರಸಭೆಯ ವತಿಯಿಂದ ಮಹಿಳೆಯರಿಗಾಗಿ ನೀರು, ನೀರಿಗಾಗಿ ಮಹಿಳೆಯರು ಎನ್ನುವ ಘೋಷಣೆಯೊಂದಿಗೆ ಬುಧವಾರ ಆಯೋಜಿಸಿದ್ದ ಜಲ ದೀಪಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುರಸಭೆಯ ನಿಕಟಪೂರ್ವ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಮಾತನಾಡಿ ಮಹಿಳೆಯರು ನೀರನ್ನು ಅವಶ್ಯಕತೆಗೆ ತಕ್ಕಂತೆ ಬಳಸಬೇಕು. ಮುಂಬರುವ ದಿನಗಳಲ್ಲಿ ಜಲಕ್ಷಾಮ ಕಾಡಲಿದ್ದು, ಮಿತವಾದ ನೀರು ಬಳಕೆಯಿಂದ ಭೂಮಿಯ ಅಂತರ್ಜಲ ಮಟ್ಟ ಏರಿಕೆಯಾಗಿ ಮುಂದಿನ ಪೀಳಿಗೆಗೆ ಶುದ್ಧವಾದ ನೀರು ಸಿಗುತ್ತದೆ ಎಂದರು.
ಸಮುದಾಯ ಸಂಘಟನಾಧಿಕಾರಿ ರಾಠೋಡ ಮಾತನಾಡಿ ದೀಪಾವಳಿ ಹಬ್ಬದ ಪ್ರಯುಕ್ತ ಸರ್ಕಾರದ ನಿರ್ದೇಶನದಂತೆ ಜಲ ದೀಪಾವಳಿಯನ್ನು ಎಲ್ಲೆಡೆ ಆಚರಿಸಲಾಗುತ್ತಿದ್ದು ನೀರಿನ ಮಿತ ಬಳಕೆಯ ಕುರಿತು ಅರಿವು ಮೂಡಬೇಕಾಗಿದೆ ಎಂದರು.
ವಿಠ್ಠಲಘಾಟ ನೀರು ಸಂಗ್ರಹಣಾ ಘಟಕ ಹಾಗೂ ಹೊನ್ನಳ್ಳಿ ನೀರು ಶುದ್ಧೀಕರಣ ಘಟಕಕ್ಕೆ ಪುರಸಭೆಯ ಮಹಿಳಾ ಸಿಬ್ಬಂದಿಗಳನ್ನು ಮತ್ತು‌ ಸದಸ್ಯರನ್ನು ಕರೆದುಕೊಂಡು ಹೋಗಿ ಪ್ರಾತ್ಯಕ್ಷಿಕೆ ತೋರಿಸಿ, ಗಂಗೆಯ ಪೂಜೆ ನಡೆಸಲಾಯಿತು. ಪುರಸಭಾ ಸದಸ್ಯರಾದ ಮಂಜುನಾಥ ನಾಯ್ಕ್, ತಾರಾ ನಾಯ್ಕ ,ಶೀಲಾ ಶೆಟ್ಟಿ, ನೀರು ಸರಬರಾಜು ವ್ಯವಸ್ಥಾಪಕ ಆನಂದು ನಾಯ್ಕ, ವ್ಯವಸ್ಥಾಪಕಿ ಸುರೇಖಾ ಪಾರ್ಸೆಕರ, ಕಂದಾಯ ಅಧಿಕಾರಿ ದಿಲೀಪ್ ನಾಯ್ಕ, ಎಂಜಿನಿಯರ್ ಶೆಲ್ಜಾ, ಮತ್ತು ಸಿಬ್ಬಂದಿ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಇದ್ದರು.