ಪ್ರತಿಫಲಾಪೇಕ್ಷೆ ಇಲ್ಲದೇ ಕಲಾ ಸೇವೆ ಮಾಡುತ್ತಿರುವ, ತೆರೆಮರೆಯ ಕಲಾವಿದರನ್ನು ಗುರುತಿಸಿ, ಗೌರವಿಸುವ ಕಾರ್ಯ ಶ್ಲಾಘನೀಯ-ಅನಂತ ಹೆಗಡೆ

ಯಲ್ಲಾಪುರ: ಪ್ರತಿಫಲಾಪೇಕ್ಷೆ ಇಲ್ಲದೇ ಕಲಾ ಸೇವೆ ಮಾಡುತ್ತಿರುವ, ತೆರೆಮರೆಯ ಕಲಾವಿದರನ್ನು ಗುರುತಿಸಿ, ಗೌರವಿಸುವ ಕಾರ್ಯ ಶ್ಲಾಘನೀಯ ಎಂದು ಪ್ರಸಿದ್ಧ ಭಾಗವತ ಅನಂತ ಹೆಗಡೆ ದಂತಳಿಗೆ ಹೇಳಿದರು.
ಅವರು ತಾಲೂಕಿನ ತೇಲಂಗಾರ ಮೈತ್ರಿ ಸಭಾಭವನದಲ್ಲಿ ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ ಇವರು ಮೈತ್ರಿ ಕಲಾ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಕಲಾ ಸನ್ನಿಧಿ ಪುರಸ್ಕಾರ ಹಾಗೂ ತಾಳಮದ್ದಲೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆ ವಿಧಾಯಕ ಕಾರ್ಯಕ್ರಮಗಳ ಮೂಲಕ ನಿರಂತರತೆ ಕಾಯ್ದುಕೊಂಡು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.
ಪ್ರಸಿದ್ಧಿ, ಪ್ರಚಾರ, ಗಳಿಕೆಯ ಆಕರ್ಷಣೆಗೊಳಗಾಗದೇ ಕಲಾ ಸೇವೆ ಮಾಡುತ್ತಿರುವ ಕಲಾವಿದರಾದ ಗಣೇಶ ಯಾಜಿ ಇಡಗುಂಜಿ, ಮಹಾಬಲೇಶ್ವರ ಭಟ್ಟ ಬೆಳಶೇರು, ಕಲಾವಿದ ಮಂಜುನಾಥ ಗಾಂವ್ಕರ ಮೂಲೆಮನೆ ಅವರಿಗೆ ‘ಕಲಾ ಸನ್ನಿಧಿ ಪುರಸ್ಕಾರ’ ಹಾಗೂ ಯುವ ಕಲಾವಿದ ವಿವೇಕ ಮರಾಠಿ ಅವರಿಗೆ ‘ಕಲಾ ಸನ್ನಿಧಿ ಯುವ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಸಂಸ್ಥೆಯ ಖಜಾಂಚಿ ದಿನೇಶ ಭಟ್ಟ ಯಲ್ಲಾಪುರ ಅಭಿನಂದನಾ ನುಡಿಗಳನ್ನಾಡಿದರು.
ಪುರಸ್ಕಾರ ಸ್ವೀಕರಿಸಿದ ಮಹಾಬಲೇಶ್ವರ ಭಟ್ಟ ಹಾಗೂ ಮಂಜುನಾಥ ಗಾಂವ್ಕರ ಮಾತನಾಡಿ, ಇನ್ನೂ ಹೆಚ್ಚಿನ ಕಲಾ ಸೇವೆಗ ಪುರಸ್ಕಾರ ಪ್ರೇರಣೆ ನೀಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹವ್ಯಾಸಿ ಕಲಾವಿದ ನಾರಾಯಣ ಭಟ್ಟ ಮೊಟ್ಟಪಾಲ ಮಾತನಾಡಿ, ಸಂಸ್ಥೆಯಿಂದ ಇನ್ನೂ ಹೆಚ್ಚಿನ ತೆರೆಮರೆಯ ಕಲಾವಿದರ ಗುರುತಿಸುವ ಕಾರ್ಯ ಆಗಲಿ ಎಂದರು.
ಮೈತ್ರಿ ಕಲಾ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ ಇದ್ದರು. ಕರ್ನಾಟಕ ಕಲಾ ಸನ್ನಿಧಿಯ ಸಹಕಾರ್ಯದರ್ಶಿ ದಿನೇಶ ಗೌಡ ಸ್ವಾಗತಿಸಿ, ನಿರ್ವಹಿಸಿದರು. ಅಧ್ಯಕ್ಷ ಶ್ರೀಧರ ಅಣಲಗಾರ ವಂದಿಸಿದರು.
ನಂತರ ಸ್ಥಳೀಯ ವಿದ್ಯಾರ್ಥಿಗಳನ್ನೊಳಗೊಂಡು ಸುಧನ್ವ ಕಾಳಗ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಗಣೇಶ ಯಾಜಿ, ಚಂದ್ರಶೇಖರ ಕುಂಟೆಮನೆ, ಸುಬ್ರಾಯ ಭಟ್ಟ ಗಾಣಗದ್ದೆ, ವಿವೇಕ ಮರಾಠಿ ಭಾಗವಹಿಸಿದ್ದರು. ಆದಿತ್ಯ ಹೆಗಡೆ ಹೊಸನಗರ, ದಿನೇಶ ಭಟ್ಟ ಅಬ್ಬಿತೋಟ, ಶ್ರೀಧರ ಅಣಲಗಾರ, ದೀಪಕ ಭಟ್ಟ ಕುಂಕಿ, ಮಂಜುನಾಥ ಬಾಳೆಜಡ್ಡಿ, ದರ್ಶನ ಕಲ್ಮನೆ, ಗಗನ ಹುಲಿಯಾನಗದ್ದೆ, ವಂದಿತಾ ಮೂಲೆಗದ್ದೆ, ಜಯಂತ ಅಬ್ಬಿತೋಟ ಅರ್ಥಧಾರಿಗಳಾಗಿ ಪಾತ್ರ ಚಿತ್ರಣ ನೀಡಿದರು.