ಕಾರಲ್ಲೇ ಗುದ್ದಲಿ ಇಟ್ಟುಕೊಂಡು ತಿರುಗಾಡ್ತಿದ್ದ ಮಾಜಿ ಶಾಸಕ ಸುನೀಲ್ ನಾಯ್ಕ-ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ವ್ಯಂಗ್ಯ

ಹೊನ್ನಾವರ: ಕಾರಲ್ಲೇ ಗುದ್ದಲಿ ಇಟ್ಟುಕೊಂಡು ತಿರುಗಾಡುತ್ತಿದ್ದ ಮಾಜಿ ಶಾಸಕ ಸುನೀಲ್ ನಾಯ್ಕರು, 3 ಕೋಟಿ ತಂದು ನೂರು ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿದ್ದರು. ದರವನ್ನ ಫಿಕ್ಸ್ ಮಾಡಲಿಕ್ಕಾಗಿ ಗುದ್ದಲಿ ಪೂಜೆಯನ್ನ ಮಾಡೋದಾಗಿತ್ತು.ಅಂತಹ ವ್ಯಕ್ತಿ ಸಚಿವ ಮಂಕಾಳ ವೈದ್ಯರ ವಿರುದ್ದ ಆಧಾರ ರಹಿತ ಆರೋಪ ಮಾಡುತ್ತಾರೆ ಎಂದು ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ವ್ಯಂಗ್ಯವಾಡಿದರು.

ಅವರು ಪಟ್ಟಣದ ಖಾಸಗಿ ಹೊಟೇಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಶಾಸಕ ಸುನೀಲ್ ನಾಯ್ಕ ಅವರು ಸಚಿವ ಮಂಕಾಳ ವೈದ್ಯ ಅವರ ವಿರುದ್ದ ಮಾಡಿರುವ ಆರೋಪ ಶುದ್ದ ಸುಳ್ಳು, ಐದು ವರ್ಷಗಳ ಕಾಲ ಸುಳ್ಳು ಹೇಳಿಕೊಂಡೆ ಆಡಳಿತ ಮಾಡಿಕೊಂಡು ಬಂದವರು,ಜನರಿಗೆ ಸರಿಯಾದ ನ್ಯಾಯವನ್ನ ದೊರಕಿಸಿ ಕೊಡಲು ವಿಫಲರಾಗಿ ಸೋತವರು ಎಂದು ಆರೋಪಿಸಿದರು.
ಮಂಕಾಳ ವೈದ್ಯರು ನೂರು ಕೋಟಿ ಅನುದಾನವನ್ನ ತಂದು ಮೂರೂ ನಾಲ್ಕು ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನ ಮಾಡಿದ್ದರು. ಆದರೆ ಸುನೀಲ್ ನಾಯ್ಕರು 3 ಕೋಟಿ ತಂದು ನೂರು ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿದ್ದರು‌. ವೈದ್ಯರ ಕಾಲದಲ್ಲಿ ಹಾಗಿರಲಿಲ್ಲ. ಲಕ್ಷ ಕಾಮಗಾರಿ ಆ ಭಾಗದ ತಾಪಂ,ಜಿಪಂ ಸದಸ್ಯರೆ ನೆರವೇರಿಸುತ್ತಿದ್ದರು ಎಂದರು.
ಕಚೇರಿ ಮಾಡಿರುವುದು ಸಾರ್ವಜನಿಕರಿಗೆ ಅನುಕೂಲ ಆಗಲಿ ಎನ್ನುವುದೆ ಹೊರತು ಸಚಿವರ ಅನುಕೂಲಕ್ಕೆ ಮಾಡಿದಂತ ಕಚೇರಿಗಳಲ್ಲ. ಎಲ್ಲ ಪಕ್ಷದವರು ಬರಬೇಕು, ಅವರ ಕೆಲಸಗಳು ಆಗಬೇಕು ಅನ್ನುವಂತ ಸದುದ್ದೇಶದಿಂದ ಎರಡು ಕಚೇರಿಗಳು ಓಪನ್ ಆಗಿವೆ.
ಸುನಿಲ್ ನಾಯ್ಕರು ಐದು ವರ್ಷಗಳ ಕಾಲ ಸುಳ್ಳು ಹೇಳಿಕೊಂಡೆ ಆಡಳಿತ ಮಾಡಿಕೊಂಡು ಬಂದರು. ಜನರಿಗೆ ಸರಿಯಾದ ನ್ಯಾಯವನ್ನ ದೊರಕಿಸಿ ಕೊಡಲು ವಿಫಲರಾದರು. ಅದಕ್ಕಾಗಿ ಮೂವತ್ತೆರಡು ಸಾವಿರಕ್ಕೂ ಅಧಿಕ ಅಧಿಕ ಮತಗಳ ಅಂತರದಿಂದ ಅವರು ಸೋಲನ್ನ ಅನುಭವಿಸಬೇಕಾಯಿತು ಎಂದು ತಿವಿದರು.

ವೈದ್ಯರು 2017 ಡಿ.5ರಂದು ಒಂದೇ ದಿನಕ್ಕೆ ಒಂದುವರೆ ಸಾವಿರ ಕೋಟಿ ರೂಪಾಯಿ ಅನುದಾನಕ್ಕೆ ಭಟ್ಕಳದಲ್ಲಿ ಗುದ್ದಲಿ ಪೂಜೆಯನ್ನ ಮಾಡಿದ್ದರು. ಸಚಿವರಾದ ಈ ಐದು ತಿಂಗಳುಗಳಲ್ಲಿ 114 ಮುಖ್ಯಮಂತ್ರಿ ಪರಿಹಾರ ನಿಧಿ ಅರ್ಜಿ ಸ್ವೀಕರಿಸಿ,84 ಅರ್ಜಿಗೆ ಒಟ್ಟು ₹28,17,229 ಪರಿಹಾರದ ಮೊತ್ತ ಬಿಡುಗಡೆಗೊಳಿಸಿದ್ದಾರೆ.ಉಡುಪಿಯ ಗುಜ್ಜಾಡಿ ನಿವಾಸಿ ಶಂಕರ ಖಾರ್ವಿ ಎನ್ನುವವರಿಗೆ ತುರ್ತು ಚಿಕಿತ್ಸೆಗೆ ಮನವಿ ನೀಡಿದ 24 ಗಂಟೆ ಅವಧಿಯೊಳಗೆ 3 ಲಕ್ಷ ಪರಿಹಾರ ಹಣ ಒದಗಿಸಿಕೊಟ್ಟಿದ್ದಾರೆ. ಪ್ರತಿ ರವಿವಾರ ಮನೆಯಲ್ಲಿ ಜನತಾ ದರ್ಶನವನ್ನ ಮಾಡುತ್ತಾರೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಅವರ ಮನೆಯಲ್ಲಿ ಜನ ಸೇರುತ್ತಾರೆ.
ಸುನಿಲ್ ನಾಯ್ಕರ ವರ್ಷಗಳ ಆಡಳಿತದ ವೈಫಲ್ಯವನ್ನ ನಾವು ನೋಡಿದ್ದೇವೆ. ಅವರಿಗೆ ಇಂದು ಮಾತನಾಡುವ ನೈತಿಕತೆ ಇಲ್ಲ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸಚಿವರು ನೀಲನಕ್ಷೆ ತಯಾರಿಸಿದ್ದಾರೆ‌. ಐದು ವರ್ಷಗಳಲ್ಲಿ ಮಾಂಕಾಳ ವೈದ್ಯರ ಆಡಳಿತದಲ್ಲಿ ಕ್ಷೇತ್ರ ಮಾದರಿ ಕ್ಷೇತ್ರ ಆಗಲಿದೆ ಎನ್ನುವ ವಿಶ್ವಾಸವಿದೆ ಎಂದರು.
ಸಚಿವರ ಬಗ್ಗೆ ಸುನೀಲ್ ನಾಯ್ಕರು ಆಧಾರ ರಹಿತ ಆರೋಪ ಮಾಡಿದ್ದಾರೆ ಎನ್ನುವ ಹೇಳಿಕೆ ನೀಡಿರುವ ನೀವು,ಅವರಿಗೆ ಬಹಿರಂಗ ಕ್ಷಮೆ ಕೇಳಲು ಒತ್ತಾಯಿಸುವಿರಾ ಅಥವಾ ಕಾನೂನು ಹೋರಾಟ ಮಾಡುವಿರಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿ,ಈಗ ಕಾನೂನಿನ ರೀತಿಯ ಹೋರಾಟ ಅಂತ ಬರುವುದಿಲ್ಲ. ನಮ್ಮ ಸರ್ಕಾರ,ಸಚಿವರ ಅಭಿವೃದ್ಧಿ ಕಾಮಗಾರಿಗಳೆ ಉತ್ತರ ನೀಡಲಿದೆ.ಆಗಲಾದರು ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಲಿ ಎಂದರು. ಸುನೀಲ್ ನಾಯ್ಕರ ಮನೆ ಪಕ್ಕದಲ್ಲಿ ವೈನ್ ಶಾಪ್ ಇತ್ತು. ಅಲ್ಲೇ ಪಕ್ಕದಲ್ಲಿ ಕಚೇರಿಯನ್ನ ಓಪನ್ ಮಾಡಿದ್ದರು‌. ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ. ಜನ ಸಾಮಾನ್ಯರಿಗೆ ಎಲ್ಲವೂ ಗೊತ್ತಿದೆ. ರೆಸಾರ್ಟಿಗೆ,ಪೆಟ್ರೊಲ್ ಬಂಕಿಗೆ ಅನುದಾನ ಬಳಸಿ ರಸ್ತೆ ಮಾಡಿಕೊಂಡಿದ್ದಾರೆ. ಎಲ್ಲವೂ ಮುಂದಿನ ದಿನಗಳಲ್ಲಿ ತನಿಖೆ ಆಗಬಹುದು ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ,ಗ್ರಾಪಂ ಅಧ್ಯಕ್ಷರಾದ ಐ.ವಿ ನಾಯ್ಕ,ಶ್ರೀಧರ ನಾಯ್ಕ, ಗಣೇಶ ನಾಯ್ಕ,ಸದಸ್ಯರಾದ ಉಷಾ ನಾಯ್ಕ,ಅಣ್ಣಪ್ಪ ಗೌಡ,ಮಾಜಿ ತಾಪಂ ಸದಸ್ಯ ಲೊಕೇಶ ನಾಯ್ಕ, ಅಣ್ಣಪ್ಪ ನಾಯ್ಕ ಮತ್ತಿತರಿದ್ದರು.