ಬೆಂಗಳೂರಿನ ಮಾರ್ಕೆಟ್​​ಗಳಲ್ಲಿ ದಸರಾ ಹಬ್ಬದ ಖರೀದಿ ಜೋರು..! ಹೂವು-ಹಣ್ಣಿನ ಬೆಲೆ ಎಷ್ಟಿದೆ ಗೊತ್ತಾ?

ಬೆಂಗಳೂರು, ಅ.22: ನಾಡಿನೆಲ್ಲೆಡೆ ಆಯುಧ ಪೂಜೆ ಹಬ್ಬದ ಸಂಭ್ರಮ ಮನೆ ಮಾಡಿದೆ. ನಾಳೆ (ಅ.22) ಆಯುಧ ಪೂಜೆ ಹಿನ್ನೆಲೆ ಹೂ, ಹಣ್ಣು, ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ರಾಜ್ಯದ ಬಹುತೇಕ ಮಾರುಕಟ್ಟೆಗಳು ಜನರಿಂದ ತುಂಬಿ ಹೋಗಿವೆ. ಹಬ್ಬ ಹಿನ್ನೆಲೆ ಹೂ, ಹಣ್ಣಿನ ದರ ಕೊಂಚ ಏರಿಕೆಯಾಗಿದೆ. ಆಯಧ ಪೂಜೆಯ ಸಾಮಗ್ರಿಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಬೂದು ಕುಂಬಳಕಾಯಿ, ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪು ಸೇರಿದಂತೆ ಆಯುಧ ಪೂಜೆಗೆ ಅಗತ್ಯವಾಗಿರುವ ವಸ್ತುಗಳ ಖರೀದಿಯಲ್ಲಿ ಜನ ತೊಡಗಿದ್ದಾರೆ.

ಮೈಸೂರಿನ ದೇವರಾಜ ಮಾರುಕಟ್ಟೆ, ಎಂ.ಜಿ ರಸ್ತೆಯ ಮಾರುಕಟ್ಟೆ ಸೇರಿದಂತೆ ವಿವಿಧೆಡೆಗಳಲ್ಲಿರುವ ಮಾರುಕಟ್ಟೆಯಲ್ಲಿ ಜನವೂ ಜನ ಸೇರಿದ್ದಾರೆ. ರಸ್ತೆ ಬದಿಯಲ್ಲೂ ಆಯುಧ ಪೂಜೆ ಸಾಮಗ್ರಿಗಳ ಖರೀದಿಯ ಭರಾಟೆ ಜೋರಾಗಿದೆ.

ಇನ್ನು ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿದೆ. ಕಾಲಿಡುವುದಕ್ಕೂ ಜಾಗವಿಲ್ಲದಷ್ಟು ಜನ ಸೇರಿದ್ದಾರೆ. ಹೂ, ಹಣ್ಣು, ತರಕಾರಿ ಖರೀದಿ ಮಾಡುವುದರಲ್ಲಿ ಜನ ಫುಲ್ ಬ್ಯುಸಿಯಾಗಿದ್ದಾರೆ. ಹೀಗಾಗಿ ಕೆ.ಆರ್. ಮಾರುಕಟ್ಟೆ ಸುತ್ತ – ಮುತ್ತ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಹಬ್ಬದ ಸಲುವಾಗಿ ಹೂವಿನ ಬೆಲೆ ಏರಿಕೆಯಾಗಿದ್ದು ತರಕಾರಿಯ ಬೆಲೆ ಕೂಡ ಕೊಂಚ ಏರಿಕೆಯಾಗಿದೆ. ಹಣ್ಣುಗಳ‌ ಬೆಲೆ‌ 100ರ ಗಡಿ ದಾಟಿದೆ.

ನಿನ್ನೆಗೆ ಹೋಲಿಸಿದರೆ ಇಂದು ಬೆಲೆ ಡಬಲ್ ಆಗಿದೆ. ತರಕಾರಿಯಲ್ಲಿ 20ರೂ. ರಿಂದ 30ರೂ ಏರಿಕೆಯಾಗಿದೆ. ಹೂವಿನ ಬೆಲೆಯಲ್ಲಿ 50 ರಿಂದ 60ರುಪಾಯಿ ಏರಿಕೆಯಾಗಿದೆ. ಬೆಲೆ ಏರಿಕೆಯ ಮಧ್ಯೆಯೂ ಜನ ಖರೀದಿಯಲ್ಲಿ ತೊಡಗಿದ್ದಾರೆ.