ಬೆಂಗಳೂರಿನಲ್ಲಿ ನಡೆಯುತ್ತಿರುವ ಫುಟ್ಬಾಲ್ ಟೂರ್ನಿಯಲ್ಲಿ ನಡೆಯುತ್ತಿದ್ಯಾ ಫಿಕ್ಸಿಂಗ್​?​ ಶಾಸಕ ಹ್ಯಾರಿಸ್​ ದೂರಿನ ಮೇರೆಗೆ ತನಿಖೆ ಚುರುಕು

ಬೆಂಗಳೂರು, ಅ.20: ಭಾರತೀಯ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು ಖುದ್ದು ಕರ್ನಾಟಕ ಪುಟ್ಬಾಲ್ ಅಸೋಸಿಯೇಷನ್ ನ ಅಧ್ಯಕ್ಷ, ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ ಉಪಾಧ್ಯಕ್ಷರೂ ಆಗಿರುವ ಶಾಸಕ ಎನ್.ಎ. ಹ್ಯಾರಿಸ್ ಅವರು ದೂರು ದಾಖಲಿಸಿದ್ದಾರೆ. ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಸದ್ಯ ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅನುಮಾನಾಸ್ಪದ ಪಂದ್ಯಗಳ ವಿಡಿಯೋ ವೀಕ್ಷಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿದೇಶಿ ಬುಕ್ಕಿಗಳ ಜಾಲಕ್ಕೆ ಭಾರತೀಯ ಫುಟ್ಬಾಲ್ ಭವಿಷ್ಯ ಬಲಿಯಾಗುತ್ತಾ ಇದೆ ಎಂದು ಶಾಸಕ ಎನ್.ಎ. ಹ್ಯಾರಿಸ್ ಅವರು ದೂರು ನೀಡಿದ್ದರು. ಸದ್ಯ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಮ್ಯಾಚ್​ಗಳು ನಡೆಯುತ್ತಿವೆ. ಬಹುತೇಕ ಮ್ಯಾಚ್​ಗಳು ಫಿಕ್ಸಿಂಗ್ ಆಗಿವೇ ಎಂದು ಹ್ಯಾರಿಸ್ ಅವರು ದೂರಿನಲ್ಲಿ ಉಲ್ಲೇಖಿಸಿ ವಾರದ ಹಿಂದೆ ನಗರ ಪೊಲೀಸ್ ಆಯುಕ್ತ ದಯಾನಂದ್​ಗೆ ದೂರು ನೀಡಿದ್ದರು. ಕಮಿಷನರ್ ದಯಾನಂದ್ ಅವರು ದೂರು ಸ್ವೀಕರಿಸಿ ಸಿಸಿಬಿ ತನಿಖೆಗೆ ಆದೇಶ ನೀಡಿದ್ದಾರೆ.

ಸಿಸಿಬಿ ಅಧಿಕಾರಿಗಳು ಕಳೆದ ಒಂದು ವಾರದಿಂದ ಗೌಪ್ಯವಾಗಿ ತನಿಖೆ ಮಾಡ್ತಾ ಇದ್ದಾರೆ. ಸಿಸಿಬಿ ತನಿಖೆ ವೇಳೆ ವಿದೇಶದಿಂದ ಮ್ಯಾಚ್ ಫಿಕ್ಸಿಂಗ್‌ ಆಗ್ತಾ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಎಲ್ಲಾ ಆಯಾಮದಲ್ಲೂ ತನಿಖೆ ಮುಂದುವರೆದಿದೆ. ಪ್ರಾಥಮಿಕ ತನಿಖೆ ಬಳಿಕ‌ ದೂರುದಾರ ಶಾಸಕ ಹ್ಯಾರಿಸ್​ಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಪ್ರಕರಣದ ಕುರಿತಾಗಿ ಇನ್ನೂ ಹೆಚ್ಚಿನ ಮಾಹಿತಿ ಹಾಗೂ ದಾಖಲೆ ಇದ್ದರೆ ನೀಡುವಂತೆ ನೋಟಿಸ್ ನೀಡಿದ್ದಾರೆ.

ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿರುವ ಬಗ್ಗೆ ಖಚಿತ ಮಾಹಿತಿ ಇದ್ದು, ಅದನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದೆ. ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಪ್ರತಿನಿಧಿಗಳ ನೆರವು ಪಡೆದು, ಪಂದ್ಯಗಳ ವಿಡಿಯೋ ಪರಿಶೀಲನೆ ನಡೆಸಲಾಗುತ್ತಿದೆ. ಆಟಗಾರರ ಆಟದಲ್ಲಿ ವ್ಯತ್ಯಾಸಗಳು ಕಂಡುಬಂದರೆ, ಅವರನ್ನು ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಫುಟ್‌ಬಾಲ್‌ ಆಟಗಾರರ ಭವಿಷ್ಯದ ದೃಷ್ಟಿಯಿಂದ, ಸದ್ಯಕ್ಕೆ ತಂಡದ ಯಾರನ್ನೂ ವಿಚಾರಣೆ ನಡೆಸಿಲ್ಲ. ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ. ಅದಾದ ನಂತರವೇ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಬಿ ಮೂಲಗಳು ಹೇಳಿವೆ.