ಹಳಿಯಾಳ : ಪಟ್ಟಣದ ಬಸವರಾಜ ಚಲನಚಿತ್ರ ಮಂದಿರದ ಹತ್ತಿರ ಬಾಡಿಗೆ ಮನೆಯೊಂದರಲ್ಲಿ ಅಂಚೆ ಸಹಾಯಕನೋರ್ವ ನೇಣಿಗೆ ಶರಣಾದ ಘಟನೆ ಶನಿವಾರ ನಡೆದಿದೆ.
ಹಳಿಯಾಳ ಪಟ್ಟಣದಲ್ಲಿರುವ ಅಂಚೆ ಕಚೇರಿಯಲ್ಲಿ ಅಂಚೆ ಸಹಾಯಕನಾಗಿ ಕೆಲಸವನ್ನು ನಿರ್ವಹಿಸುತ್ತಿದ್ದ 30 ವರ್ಷ ವಯಸ್ಸಿನ ಮಹಾಂತೇಶ್ ಮಹಾದೇವ ತಳವಾರ ಎಂಬಾತನೇ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಈತ ಅವಿವಾಹಿತನಾಗಿದ್ದು, ಬಸವರಾಜ ಚಲನಚಿತ್ರ ಮಂದಿರದ ಹತ್ತಿರವಿರುವ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದನು.
ಈತನು ಈ ಹಿಂದೆ ದಾಂಡೇಲಿಯ ಅಂಚೆ ಇಲಾಖೆಯಲ್ಲಿ ಅಂಚೆಯಣ್ಣನಾಗಿ ಸೇವೆಯನ್ನು ಸಲ್ಲಿಸುತ್ತಿದ್ದನು. ಕಳೆದ ಒಂದೆರಡು ವರ್ಷಗಳ ಹಿಂದೆ ಹಳಿಯಾಳ ಅಂಚೆ ಕಚೇರಿಗೆ ವರ್ಗಾವಣೆಗೊಂಡು ಅಂಚೆ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದನು.
ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಹಳಿಯಾಳ ಪಿಎಸ್ಐ ವಿನೋದ್ ಎಸ್ ಕೆ ಅವರ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದೆ.