ಹಳಿಯಾಳ : ತಾಲೂಕಿನ ಕೆಸರೋಳ್ಳಿ ಕ್ರಾಸ್ ನಿಂದ ಕೆಸರೋಳ್ಳಿ ಗ್ರಾಮದ ಕಡೆಗೆ ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಬಿದ್ದು ಸವಾರನೋರ್ವ ಗಂಭೀರ ಗಾಯಗೊಂಡು, ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ, ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿರುವುದರ ಬಗ್ಗೆ ಶನಿವಾರ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.
ಯಲ್ಲಾಪುರ ತಾಲೂಕಿನ ಕಿರವತ್ತಿಯ ಕೋನಮಡ್ಡಿ ಪ್ರದೇಶದ ನಿವಾಸಿ ಕುಮಾರ್ ರಾಮು ಯಡಗೆ ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತ ಸೆಪ್ಟೆಂಬರ್ 16ರಂದು ತಾಲೂಕಿನ ಕೆಸರೋಳ್ಳಿ ಕ್ರಾಸ್ ನಿಂದ ಕೆಎ:31, ಯು: 5020 ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಕೆಸರೋಳ್ಳಿ ಗ್ರಾಮದ ಹತ್ತಿರ ಸ್ಕಿಡ್ಡಾಗಿ ಬಿದ್ದು ಗಂಭೀರ ಗಾಯಗೊಂಡಿದ್ದನು. ಗಂಭೀರ ಗಾಯಗೊಂಡಿದ್ದ ಈತನನ್ನು ತಕ್ಷಣವೇ ಧಾರವಾಡ ಎಸ್.ಡಿ.ಎಮ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನುವ ಮಾಹಿತಿ ಶನಿವಾರ ಮಾಧ್ಯಮಕ್ಕೆ ಲಭ್ಯವಾಗಿದೆ. ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.