ಪೈಪ್ಲೈನ್ ಕಾಮಗಾರಿಯ ವಿರುದ್ಧ ವ್ಯಾಪಕ ಆಕ್ರೋಶ : ಕೆಲಸ‌ ತಡೆದು ಸಾರ್ವಜನಿಕರಿಂದ ಪ್ರತಿಭಟನೆ

ದಾಂಡೇಲಿ : ನಗರದ ಹಳೆ ದಾಂಡೇಲಿಯಲ್ಲಿ ಕಾಳಿ ನದಿಯಿಂದ ನೀರು ಕೊಂಡೊಯ್ಯುವ ಪೈಪ್ಲೈನ್ ಕಾಮಗಾರಿ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ‌ ನೀಡದೇ ಕಾಮಗಾರಿ ನಡೆಸುತ್ತಿರುವುದಕ್ಕೆವ್ಯಾಪಕ ಆಕ್ರೋಶ ವ್ಯಕ್ತವಾಗಿ, ಕಾಮಗಾರಿಯನ್ನು ತಡೆದು, ಕೆಲಸ ನಿಲ್ಲಿಸಿ ಪ್ರತಿಭಟಿಸಿದ ಘಟನೆ ಇಂದು ಶನಿವಾರ ನಡೆದಿದೆ.

ಸಾರ್ವಜನಿಕರಿಗೆ ಯಾವುದೇ ಮಾಹಿತಿಯನ್ನು ನೀಡದೆ, ಏಕಾಏಕಿ ಪೈಪ್ ಲೈನ್ ಕಾಮಗಾರಿ ನಡೆಸುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಹಳೆ ದಾಂಡೇಲಿಯ ಮುಖ್ಯ ರಸ್ತೆಯ ಬದಿಯಲ್ಲಿ ಕಾಮಗಾರಿ ನಡೆಸುವುದರಿಂದ ಸ್ಥಳೀಯ ಜನತೆಗೂ ಹಾಗೂ ಸಾರ್ವಜನಿಕರಿಗೂ ತೀವ್ರ ತೊಂದರೆಯಾಗಲಿದೆ. ಈಗಾಗಲೇ ಸಾಕಷ್ಟು ಪೈಪ್ ಲೈನ್ ಕಾಮಗಾರಿ ನಡೆದು ರಸ್ತೆ ತೀವ್ರ ಹದಗೆಟ್ಟಿದ್ದು ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ಇಂತಹ ಕಾಮಗಾರಿಗಳಿಂದ ಹಳೆದಾಂಡೇಲಿ ಪ್ರದೇಶದ ಜನ ನಿತ್ಯ ಧೂಳು ತಿನ್ನುವಂತಾಗಿದೆ. ಇದರಿಂದ ಸ್ಥಳೀಯ ಜನತೆಯ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀಳುತ್ತಿದೆ. ಹಳೆ ದಾಂಡೇಲಿಯ ಮುಖ್ಯ ರಸ್ತೆಯ ಬದಿಯಲ್ಲಿ ಪೈಪ್ಲೈನ್ ಕೊಂಡೊಯ್ಯುವ ಬದಲು ಹಳೆದಾಂಡೇಲಿಯ ಟಿಂಬರ್ ಡಿಪೋ ಪ್ರದೇಶದ ಮೂಲಕ ಪೈಪ್ಲೈನ್ ಕಾಮಗಾರಿಯನ್ನು ನಡೆಸುವಂತೆ ಆಗ್ರಹಿಸಿದ್ದಾರೆ. ಇದೇ ರಸ್ತೆಯ ಬದಿಯಲ್ಲಿ ಪೈಪ್ ಲೈನ್ ಕಾಮಗಾರಿಯನ್ನು ನಡೆಸಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಸಾರ್ವಜನಿಕರು ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ವಿಷ್ಣು ಕಾಮತ್, ರಾಜು ಕೋಡ್ಕಣಿ, ಮಿಲಿಂದ್ ಕೋಡ್ಕಣಿ, ದಿವಾಕರ್ ನಾಯ್ಕ, ಗಣಪತಿ ನಾಯ್ಕ, ಇಲಿಯಾಸ್ ಐನಾಪುರ, ಮೆಹಮೂದ್,ರೇಣುಕಾ ನಾಗರಾಜ‌ ನಾಯ್ಕ, ಕಂದಸ್ವಾಮಿ ಗೌಂಡರ್, ಪ್ರತೀಕ್ ಬಾಬುಸೇಟ್, ಮನಿಕಂಠ, ಶಬ್ಬೀರ್, ಬರ್ನಾಡ್ ಅಂಥೋನಿ, ಮಂಜುನಾಥ್ ಉತ್ತರಕರ ಮೊದಲಾದವರು ಉಪಸ್ಥಿತರಿದ್ದರು.