ಹಳಿಯಾಳ ಪಟ್ಟಣದಲ್ಲಿ ಗಾಂಧಿ‌ ಜಯಂತಿ ಆಚರಣೆ ಮತ್ತು ಅಮೃತ ಕಲಶದ ಮೆರವಣಿಗೆ

ಹಳಿಯಾಳ : ತಾಲ್ಲೂಕಾಡಳಿತ, ತಾ.ಪಂ ಮತ್ತು ಪುರ ಸಭೆಯ ಆಶ್ರಯದಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಾಗೂ ಲಾಲ್ ಬಹದ್ದೂರು ಶಾಸ್ತ್ರೀಯವರ ಜನ್ಮ ದಿನಾಚರಣೆ ಮತ್ತು “ನನ್ನ ಮಣ್ಣು ನನ್ನ ದೇಶ” ಕಾರ್ಯಕ್ರಮಕ್ಕೆ ಇಂದು ಸೋಮವಾರ ಚಾಲನೆಯನ್ನು ನೀಡಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರು ಶಾಸ್ತ್ರೀಯವರ ಭಾವಚಿತ್ರಕ್ಕೆ ಆರತಿ ಬೆಳಗಿ, ಪುಷ್ಪ ಗೌರವವನ್ನು ಸಲ್ಲಿಸಲಾಯಿತು.

ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದಡಿ ಅಮೃತ ಕಲಶದ ಮೆರವಣಿಗೆಯು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಿಂದ ಆರಂಭಗೊಂಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೊನೆಯಲ್ಲಿ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಕೆ.ರತ್ನಾಕರ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪರಶುರಾಮ‌ ಗಸ್ತೆ, ಸಿಪಿಐ ಸುರೇಶ್ ಶಿಂಧೆ, ಪುರಸಭೆಯ ಮುಖ್ಯಾಧಿಕಾರಿ ಅಶೋಕ್ ಸಾಳೆನ್ನವರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪಿ.ಐ.ಮಾನೆ, ತಹಶೀಲ್ದಾರ್ ಕಾರ್ಯಾಲಯ, ತಾ.ಪಂ, ಪುರಸಭೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ವೇದಿಕೆ, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.