ಹವಗಿಯಲ್ಲಿ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡ ದಶಲಕ್ಷಣ ಪರ್ವ

ಹಳಿಯಾಳ : ಜೈನ ಧರ್ಮದ ಪ್ರಮುಖ ಹಬ್ಬವಾದ ದಶಲಕ್ಷಣ ಪರ್ವವು ಹಳಿಯಾಳ ತಾಲೂಕಿನ ಹವಗಿಯಲ್ಲಿರುವ ಶ್ರೀ ಪಾರ್ಶ್ವನಾಥ ದಿಗಂಬರ ಬಸದಿಯಲ್ಲಿ ಭಾನುವಾರ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.

ಹವಗಿಯ ಶ್ರೀ ಪಾರ್ಶ್ವನಾಥ ಬಸದಿಯಲ್ಲಿ 10 ದಿನಗಳಿಂದ ದಶಲಕ್ಷಣ ಪರ್ವವನ್ನು ವಿವಿಧ ಪೂಜಾರಾಧನೆಗಳೊಂದಿಗೆ ನೆರವೇರಿಸಲಾಯ್ತು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನಮೋಕಾರ ಮಂತ್ರ ಪಠಣೆ, ಭಜನೆ ಹಾಗೂ ದಶಧರ್ಮಗಳ ಬಗ್ಗೆ ಅರಿವನ್ನು ಮೂಡಿಸಲಾಯ್ತು.

ಶ್ರೀ ಪಾರ್ಶ್ವನಾಥ ದಿಗಂಬರ ಬಸದಿಯ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಧರಣೇಂದ್ರ ಶಾಸ್ತ್ರಿಯವರು ಶ್ರಾವಕ -ಶ್ರಾವಕಿಯರನ್ನು ಉದ್ದೇಶಿಸಿ ಮಾತನಾಡುತ್ತಾ, ದಶಲಕ್ಷಣ ಪರ್ವ ಭೋಗದ ಪರ್ವವಲ್ಲ, ತ್ಯಾಗದ ಪರ್ವ, ವೈರಾಗ್ಯದ ಪರ್ವ. ವೈರಾಗ್ಯದ ಕಡೆಗೆ ಮನಸ್ಸನ್ನು ಕೊಂಡೊಯ್ಯುವ ಪರ್ವವಾಗಿದೆ. ಇದು ಅಧ್ಯಾತ್ಮಿಕ ಪರ್ವವಾಗಿದ್ದು, ನಮ್ಮ ಭಾವನೆಗಳನ್ನು ಪರಿಷ್ಕರಿಸಿ ಪರಿಶುದ್ದಗೊಳಿಸುವ ಹಬ್ಬವಾಗಿದೆ. ವರ್ತನೆಯಲ್ಲಿ ಪರಿವರ್ತನೆ ಮಾಡುವ ಪರ್ವವಾಗಿದೆ. ವಿಕಾರ ಭಾವನೆಗಳನ್ನು ತ್ಯಜಿಸಿ, ಮಾನವೀಯ ಮೌಲ್ಯಗಳನ್ನು ಹೊಂದಿರುವ ಉದಾತ್ತ ಭಾವನೆಗಳನ್ನು ಸ್ವೀಕರಿಸುವುದೇ ಈ ಪರ್ವದ ಮೂಲ ಉದ್ದೇಶವಾಗಿದೆ ಎಂದರು.

ಧನ್ಯ ಕುಮಾರ್ ಪಂಡಿತ್ ಅವರ ಪೌರೋಹಿತ್ಯದಲ್ಲಿ ನಡೆದ ಪೂಜಾ ಕಾರ್ಯಕ್ರಮದ ಈ ಸಂದರ್ಭದಲ್ಲಿ ಶ್ರೀ ಪಾರ್ಶ್ವನಾಥ ದಿಗಂಬರ ಬಸದಿಯ ಆಡಳಿತ ಸಮಿತಿಯ ಅಧ್ಯಕ್ಷರಾದ ಅನಂತ್ ಶಿರ್ಗಾಪುರ್, ಕಾರ್ಯದರ್ಶಿ ಶ್ರೀಣಿಕ್ ತೇಗನಳ್ಳಿ, ಪ್ರಮುಖರಾದ ಅಮಿತ್ ಪಂಡಿತ್, ಸಂದೇಶ ಪಾಟೀಲ್, ಶ್ರೀಧರ್ ಹೊಸಮನಿ, ಅನಿಲ್ ದೊಡ್ಡ ಜೈನ್, ಪ್ರದೀಪ್ ಅಂಬಿಪ್ಪಿ, ಮನೋಜ್ ಚಿನಗಿ, ಪ್ರಕಾಶ್ ಪಾಟೀಲ್, ಚಂದನಾ ಬಾಲಾ, ಕಲ್ಪನಾ ಪಾಟೀಲ್ ಮೊದಲಾದವರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.