ಭಟ್ಕಳ: ಅರಣ್ಯ ಜಮೀನಿನಲ್ಲಿ ಪಂಚಾಯತ ರಸ್ತೆ ಇದೆ ಎಂದು ದೃಢೀಕರಣ ಪತ್ರ ನೀಡಿ ಕರ್ತವ್ಯ ಲೋಪ ಎಸಗಿದ ಈ ಹಿಂದಿನ ಹೆಬಳೆ ಪಂಚಾಯತ್ ಪಿಡಿಓ, ಜಯಂತಿ ನಾಯ್ಕ ಇವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಮತ್ತು ತಾಲೂಕು ಸಮಿತಿ ವತಿಯಿಂದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ತಾಲೂಕಾ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಮಂಗಳವಾರದಂದು ಮನವಿ ಸಲ್ಲಿಸಿದರು.
ಜಿಲ್ಲೆಯ ಭಟ್ಕಳ ತಾಲೂಕಿನ ಸಗಡಿ ಹೋಬಳೆಯ ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಹೆಬಳ ಗ್ರಾಮದ ಕಂದಾಯ ಸರ್ವೆ ನಂಬರಿನ 220ಬ ಹಿಸ್ಸಾ 1 ಕ್ಷೇತ್ರ 1-24- 00 ನೇದರ ಜಮೀನಿನ ಮಾಲಿಕರಾದ ಸುವೇದಾ ಕೋಂ ಮೊಹಮ್ಮದ್ ಆಸೀನ್ ಸಾಹೇಬ್ ಕೋಲಾ ಹಾಗೂ ಸೀಮಾ ಕೋಂ ಮಹದ ಇರ್ಷಾದ್ ಸಾಹೇಬ್ ಗವಾಯಿ ಇವರ ಹೆಸರಿನಲ್ಲಿ ಈ ಜಮೀನು ದಾಖಲಿರುತ್ತದೆ.
ಹೀಗಿರುವಾಗ ಈ ಜಮೀನಿಗೆ ಹೋಗಿ ಬರಲು ಹೆಬಳೆ-ತೆಂಗಿನಗುಂಡಿ ಮುಖ್ಯ ರಸ್ತೆಯಿಂದ ಅರಣ್ಯ ಸರ್ವೆ ನಂಬರ 220ಅ ನೇದರ ಅರಣ್ಯ ಜಮೀನಿನ ಮೂಲಕ ದಾರಿ ಇರುತ್ತದೆ. ಈ ದಾರಿಗೆ ಗ್ರಾಮ ಪಂಚಾಯತ ಹೆಬಳೆ ಇದರ ಅನುದಾನವನ್ನು ಬಳಸಿರುವುದಿಲ್ಲ.
ಈ ವಿಷಯವನ್ನು ಮಾಹಿತಿ ಹಕ್ಕು ಅಧಿನಿಯಮ 2005 ರ ಅಡಿಯಲ್ಲಿ ಕೇಳಿ ಮಾಹಿತಿಯನ್ನು ಪಡೆದಿದ್ದು, ಈ ಜಮೀನಿನಲ್ಲಿ ಇಂದಿನವರೆಗೆ ಪಂಚಾಯತ ರಸ್ತೆ ಆಗಿರುವುದಕ್ಕೆ ಯಾವುದೇ ದಾಖಲೆ ಲಭ್ಯ ಇರುವುದಿಲ್ಲ ಎಂದು ಅಧಿಕೃತ ಪತ್ರ ಪಡೆದುಕೊಂಡಿದ್ದು ನಿಮ್ಮ ಗಮನಕ್ಕೆ ತರುತ್ತೇವೆ.ಆದರೆ, ಹೆಬಳೆ ಗ್ರಾಮದ ಕಂದಾಯ ಸರ್ವೆ ನಂಬರಿನ 220ಬ ಹಿಸ್ಸಾ 1 ಕ್ಷೇತ್ರ 1-24-00 ನೇದರ ಜಮೀನನ್ನು ಬಿನ್ ಶೆತ್ಕಿ ಮಾಡಲು ಅರ್ಜಿ ಸಲ್ಲಿಸುವಾಗ ಗ್ರಾಮ ಪಂಚಾಯತ ಹೆಬಳೆ ಇದರ ಆಗಿನ ಪಿಡಿ.ಓ. ಆಗಿ ಕರ್ತವ್ಯದಲ್ಲಿದ್ದ ಶ್ರೀಮತಿ ಜಯಂತಿ ನಾಯ್ಕ ಎಂಬುವವರು ಗ್ರಾಮ ಪಂಚಾಯತ ಅನುದಾನವೇ ಬಳಸದೇ ಇರುವ ದಾರಿಗೆ ಗ್ರಾಮ ಪಂಚಾಯತ ರಸ್ತೆ ಸಂಪರ್ಕ ಇದೆ ಎಂದು ಡಿಸೆಂಬರ್ 23 2016 ರಂದು ಕರ್ತವ್ಯ ಲೋಪ ಎಸಗಿ ತಮ್ಮ ಸಹಿಯನ್ನು ಮಾಡಿ ದೃಢೀಕರಣ ಪತ್ರ ನೀಡಿದ್ದಾರೆ. ಈ ಬಗ್ಗೆ ದಾಖಲೆ ಸಹ ಇದೆ.
ಆದ್ದರಿಂದ ಜಮೀನಿನ ಮಾಲೀಕರ ಆಮಿಷಕ್ಕೆ ಮಣಿದು ಸರಕಾರಕ್ಕೆ ಮೋಸ ಮಾಡುವ ಸಂಚು ರೂಪಿಸಿ, ಕರ್ತವ್ಯಲೋಪ ಎಸಗಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಕಂದಾಯ ಇಲಾಖೆಯ, ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾಧಿಕಾರಿಗಳಿಗೆ ಮೋಸ ಮಾಡುವ ಸಂಚಿನಲ್ಲಿ ಭಾಗಿಯಾಗಿರುವ ಅಂದಿನ ಹೆಬಳೆ ಗ್ರಾಮ ಪಂಚಾಯತ ಪಿ.ಡಿ.ಒ. ಜಯಂತಿ ನಾಯ್ಕ ಇವರ ಮೇಲೆ ಅವಶ್ಯ ಕಾನೂನು ಕ್ರಮ ಕೈಗೊಂಡು, ಇವರನ್ನು ತಕ್ಷಣದಿಂದ ವಜಾಗೊಳಿಸಿ, ಇವರು ಸುಳ್ಳು ದಾಖಲೆ ಸೃಷ್ಟಿಸಿ ನೀಡಿರುವ ರಸ್ತೆ ದೃಢೀಕರಣ ಪತ್ರವನ್ನು ಹಿಂದಕ್ಕೆ ಪಡೆದು, ಸುಳ್ಳು ದಾಖಲೆಯನ್ನು ನಂಬಿ ಮಂಜೂರಿ ನೀಡಿರುವ ಬಿನ್ ಶೆತ್ಕಿ ಪ್ರಕರಣವನ್ನು ಕೂಡಲೇ ರದ್ದುಪಡಿಸಲು ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಲಾಯಿತು.
ಈ ಸಂಧರ್ಭದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ತಾಲೂಕು ಸಮಿತಿ ಅಧ್ಯಕ್ಷ ನಾಗೇಂದ್ರ ನಾಯ್ಕ, ಉಪಾಧ್ಯಕ್ಷ ಶಂಕರ ನಾಯ್ಕ ಬೆಟ್ಕೂರು, ಪ್ರಧಾನ ಕಾರ್ಯದರ್ಶಿ ನಾಗೇಶ ನಾಯ್ಕ, ಸಹ ಕಾರ್ಯದರ್ಶಿ ವಸಂತ ದೇವಾಡಿಗ ಇದ್ದರು.