ಪ್ರತಿಭಾ ಕಾರಂಜಿಯ ವಿಜೇತ ವಿದ್ಯಾರ್ಥಿ/ನಿಯರಿಗೆ ಬಹುಮಾನ ವಿತರಿಸಿದ ಶಾಸಕರು

ಗೋಕರ್ಣ : ಪಟ್ಟಣದ ಗಂಗೆಕೊಳ್ಳದ ಕಿತ್ತೂರು ರಾಣಿಚೆನ್ನಮ್ಮ ವಸತಿ ಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಗೋಕರ್ಣ ವಲಯ ಮಟ್ಟದ ಪ್ರೌಢಶಾಲೆಗಳ 2023-24ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ದಿನಕರ ಶೆಟ್ಟಿಯವರು ಬಹುಮಾನ ವಿತರಣೆ ಮಾಡಿದರು.

ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, “ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದು ಎಷ್ಟು ಮುಖ್ಯವೋ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಷ್ಟೇ ಮುಖ್ಯ. ಕ್ರೀಡೆ, ಕಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿಭಾ ಕಾರಂಜಿ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ವೇದಿಕೆಯಾಗಿದೆ. ಇಂತಹ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸುವುದಕ್ಕಿಂತಲೂ ಭಾಗವಹಿಸುವುದು ಮುಖ್ಯ.” ಎಂದು ಹೇಳಿದರು.

ಈ ಸಂದರ್ಭದಲ್ಲಿ ನಾಡುಮಾಸ್ಕೇರಿ ಗ್ರಾಮಪಂಚಾಯತ್ ಉಪಾಧ್ಯಕ್ಷೆ ವಿಜಯಾ ನಾಯಕ, ಗಂಗೆಕೊಳ್ಳದ ಕಿತ್ತೂರು ರಾಣಿಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಎನ್. ಆರ್. ನಾಯಕ, ಗ್ರಾಮಪಂಚಾಯತ್ ಸದಸ್ಯರುಗಳಾದ ರಾಜೇಶ ನಾಯಕ, ಚಂದ್ರಶೇಖರ ನಾಯ್ಕ, ದಯಾ ಮೆತಾ, ನಾಗಾ ತಾಂಡೆಲ್, ರೋಹಿಣಿ ನಾಯ್ಕ, ಭದ್ರಕಾಳಿ ಪ್ರೌಢಶಾಲೆಯ ಪ್ರಾಂಶುಪಾಲ ಸಿ. ಜಿ. ನಾಯ್ಕ, ನಾಡುಮಾಸ್ಕೇರಿ ಪ್ರೌಢಶಾಲೆಯ ಪ್ರಾಂಶುಪಾಲೆ ಪದ್ಮಾ ನಾಯಕ ಅವರು ವೇದಿಕೆಯಲ್ಲಿ ಇದ್ದರು.