ಹಳಿಯಾಳ : ಪಟ್ಟಣದ ಪುರಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶ್ರಯದಡಿ ಹಳಿಯಾಳ ತಾಲೂಕು ಮಟ್ಟದ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಜಿ.ಕೆ.ರತ್ನಾಕರ ಅವರು ಆರೋಗ್ಯವಂತ ಮಕ್ಕಳು ಭವಿಷ್ಯದ ದೇಶದ ಆಸ್ತಿ. ಈ ನಿಟ್ಟಿನಲ್ಲಿ ಮಕ್ಕಳ ಆರೋಗ್ಯ ಸಂರಕ್ಷಣೆಯ ಕಡೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ಕರೆ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ.ಲಕ್ಷ್ಮೀದೇವಿ.ಎಸ್ ಅವರು ಮಾತನಾಡಿ ಇಲಾಖೆಯ ವತಿಯಿಂದ ಪ್ರತಿ ವರ್ಷದಂತೆ ಸೆಪ್ಟೆಂಬರ್ ತಿಂಗಳಲ್ಲಿ ರಾಷ್ಟ್ರೀಯ ಪೋಷಣ್ ಮಾಸವನ್ನು ಆಚರಿಸಲಾಗುತ್ತಿದೆ. ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಮುಖ್ಯವಾಗಿ ತೀವ್ರ ಅಪೌಷ್ಠಿಕ ಮಕ್ಕಳನ್ನು ಗುರುತಿಸುವಿಕೆ ಮತ್ತು ಚಿಕಿತ್ಸೆ ನೀಡುವುದು ಹಾಗೂ ಕೈತೋಟಗಳನ್ನು ಬೆಳೆಸಿ ಪೌಷ್ಠಿಕ ಆಹಾರ ಸೇವಿಸಲು ಉತ್ತೇಜಿಸುವುದು ಮತ್ತು ಅಭಿವೃದ್ಧಿ ಪಡಿಸುವುದೇ ಆಗಿದೆ. ಈ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪರಶುರಾಮ ಗಸ್ತೆ, ಬಿ.ಆರ್.ಪಿ ದಶರಥ ಗೌಡ ಅವರು ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸದೃಢ ಆರೋಗ್ಯವಂತ ಮಗು ಸ್ಪರ್ಧೆ ಕಾರ್ಯಕ್ರಮದಡಿ ಆರೋಗ್ಯವಂತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಾಲಕೃಷ್ಣ ಮತ್ತು ರಾಧೆ ವೇಷಭೂಷಣ ಮಾಡಿದ ಮಕ್ಕಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಮಕ್ಕಳು, ಫಲಾನುಭವಿಗಳು, ಕಛೇರಿಯ ಸಿಬ್ಬಂದಿಗಳು ಭಾಗವಹಿಸಿದರು.