ಯಲ್ಲಾಪುರ: ಮನರಂಜನೆಯ ಜೊತೆಗೆ ಮನೋ ವಿಕಾಸಕ್ಕೂ ಕಾರಣವಾಗುವ ಕಲೆ ಯಕ್ಷಗಾನ ಎಂದು ಉಮ್ಮಚ್ಗಿ ಸಂಸ್ಕೃತ ಪಾಠಶಾಲೆಯ ಅಧ್ಯಾಪಕ ಡಾ.ಮಹೇಶ್ ಭಟ್ಟ ಇಡಗುಂದಿ ಹೇಳಿದರು.
ಅವರು ತಾಲೂಕಿನ ಉಮ್ಮಚಗಿಯ ವಿದ್ಯಾ ಗಣಪತಿ ಸಭಾಭವನದಲ್ಲಿ ಶ್ರೀರಾಜರಾಜೇಶ್ವರಿ ಯುವತಿ ಮಂಡಳಿ, ಐಶ್ವರ್ಯ ಕಲಾ ಮಂಡಳಿ, ಶ್ರೀ ಚನ್ನೇಶ್ವರ ಹವ್ಯಾಸಿ ಕಲಾವಿದರ ಸಂಘ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಕಲಾವಿದ ಕೃಷ್ಣ ಚಿಕ್ಕಯ್ಯ ಪೂಜಾರಿ ವಾನಳ್ಳಿ ಇವರನ್ನ ಸನ್ಮಾನಿಸಲಾಯಿತು. ಗ್ರಾ.ಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಚ್ಚು ಕಲಾ ಪ್ರದರ್ಶನಗಳು ನಡೆದರೆ ಕಲೆ, ಕಲಾವಿದರು ಉಳಿಯಲು ಸಾಧ್ಯ ಎಂದರು.
ಗ್ರಾ.ಪಂ.ಸದಸ್ಯ ಗ.ರಾ.ಭಟ್ಟ, ಸಂಘಟಕ ನಾಗರಾಜ ಹೆಗಡೆ ಉಪಸ್ಥಿತರಿದ್ದರು. ರಾಜೇಶ ಶಾಸ್ತ್ರಿ ನಿರ್ವಹಿಸಿದರು. ನಂತರ ಹವ್ಯಾಸಿ ಕಲಾವಿದರಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು.