ಅಂಕೋಲಾ ಮಾರುಕಟ್ಟೆಯಲ್ಲೀಗ ವರ್ಣಮಯ ರಾಖಿಗಳ ಆಕರ್ಷಣೆ ; ರಕ್ಷಾ ಬಂಧನದ ಸಂಭ್ರಮಕ್ಕೆ ಸಜ್ಜು

ಅಂಕೋಲಾ : ಅಂಕೋಲಾ ತಾಲ್ಲೂಕು ತನ್ನದೇ ಆದ ವಿಶೇಷ ಸಾಂಸ್ಕೃತಿಕ ಸಾಹಿತ್ಯಿಕ ಧಾರ್ಮಿಕ ವಿಧಿ ವಿಧಾನಗಳ ಆಚರಣೆಗೆ ಪ್ರಸಿದ್ದಿ ಪಡೆದಿದೆ. ಇಲ್ಲಿನ ಸಾಂಪ್ರದಾಯಿಕ ಹಬ್ಬಗಳ ಆಚರಣೆ ಭಿನ್ನತೆಯ ಕಾರಣದಿಂದ ಮೆರಗು ಹೆಚ್ಚಿಸಿದೆ. ಅದರಲ್ಲಿಯೂ ಶ್ರಾವಣಮಾಸ ಬಂತೆಂದರೆ ಸಾಕು ಸಾಲು ಸಾಲು ಹಬ್ಬದ ಸಂಭ್ರಮ ಇಲ್ಲಿ ಕಂಡು ಬರುತ್ತದೆ.
ಬುಧವಾರ ತಾಲ್ಲೂಕಿನ ಜನರು ಕರಾವಳಿಯ ವಿಶಿಷ್ಟ ಪರಂಪರೆ ಎನ್ನುವಂತೆ ನಾಗರ ಪಂಚಮಿ ಹಬ್ಬ ಆಚರಿಸಿದ್ದಾರೆ. ಇಲ್ಲಿನ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ರೈತ ಕುಟುಂಬಗಳಿಗೆ ಸೇರಿದ ಹೊಲ ಗದ್ದೆಗಳಎಲ್ಲಿ ನಾಗಸ್ಥಾನಗಳು ಇರುವುದು ಸಾಮಾನ್ಯ. ತಾವು ಬೆಳೆಯುವ ಬೆಳೆಯನ್ನು ರಕ್ಷಿಸುವ ದೈವ ಎನ್ನುವುದು ರೈತರ ಭಾವನೆ.
ನಾಗರ ಪಂಚಮಿಯಂದೂ ಕುಟುಂಬದವರೆಲ್ಲ ಸೇರಿ ನಾಗದೇವರಿಗೆ ಶ್ರದ್ದಾ ಭಕ್ತಿ ಪೂರ್ವಕವಾಗಿ ಹಾಲೆರೆದು ಪೂಜೆ ಸಲ್ಲಿಸುತ್ತಾರೆ.
ನಾಗರ ದೇವರಿಗೆ ಪ್ರಿಯವಾದ ಕೇದಿಗೆ ಹೂವಿನ ಮಾರಾಟ ಹಬ್ಬದ ದಿನದಂದು ಮಾರುಕಟ್ಟೆಯಲ್ಲಿ ಬಿರುಸಾಗಿತ್ತು
ಸುಳಿ ರೊಟ್ಟಿ ಎಂದು ಸ್ಥಳೀಯವಾಗಿ ಕರೆಯುವ ಪಾತೋಳಿ ನೈವೇದ್ಯ ತಯಾರಿಸಿ ನಾಗರ ಪೂಜೆಗೆ ಅರ್ಪಿಸುವುದು ವಿಶೇಷ. ಅಕ್ಕಿ ಹಿಟ್ಟಿನ ಹೊದಿಕೆಯಲ್ಲಿ ತೆಂಗಿನಕಾಯಿ ಸುಳಿ ಬೆಲ್ಲದಿಂದ ತಯಾರಿಸಿದ ಹೂರಣವನ್ನು ತುಂಬಿ ಅರಿಶಿನ ಎಲೆಯಲ್ಲಿ ಮಡಚಿ ಬೇಯಿಸಿ ತಯಾರಿಸುವ ಸುಳಿರೊಟ್ಟಿ ಅಥವಾ ಪಾತೋಳಿ ನಾಗದೇವರಿಗೆ ಇಷ್ಟವಾದ ಖಾದ್ಯ ಎಂಬುದು ಈ ಭಾಗದ ಜನರ ನಂಬಿಕೆಯಾಗಿದೆ. ನಾಗರ ದೇವರಿಗೆ ಅರ್ಪಿಸಲು ಸಾಧ್ಯವಾಗದವರು ತಮ್ಮ ಮನೆಯಲ್ಲಿನ ಮಣ್ಣಿನ ಅಕ್ಕಿ ತುಂಬುವ ಮಡಿಕೆಯಲ್ಲಿ ಇಟ್ಟು ಪೂಜಿಸುವುದು ಕೂಡ ಹಿಂದಿನ ವಾಡಿಕೆಯಾಗಿದೆ. ತೆಂಗಿನ ಗರಿಯಿಂದ ನೇಯ್ದ ಹಾವನ್ನು ಪೂಜೆಗೆ ಅರ್ಪಿಸುವುದು ಇಲ್ಲಿನ ಆಚರಣೆಯ ಆಕರ್ಷಣೆ.
ನಾಗರ ಪಂಚಮಿ ಹೆಣ್ಣು ಮಕ್ಕಳಿಗೆ ತವರಿನ ಭಾಂದವ್ಯ ಬೆಸೆಯುವ ಆಚರಣೆ ಹಾಗೆಯೇ ಪಂಚಮಿ ಹಬ್ಬ ಮುಗಿದು ಒಂಬತ್ತು ದಿನಗಳ ನಂತರ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ರಕ್ಷಾ ಬಂಧನದ ಸಂಬ್ರಮ ತಾಲ್ಲೂಕಿನಲ್ಲಿ ಮೆರಗು ನೀಡುತ್ತದೆ. ಸಹೋದರ ಸಹೋದರಿಯರ ನಡುವಿನ ಪ್ರೀತಿಯ ಬೆಸುಗೆಯಾಗಿ ರಾಖಿ ತೊಡಿಸಿ ಹಬ್ಬ ಆಚರಿಸಲಾಗುತ್ತದೆ. ರಾಖಿ ತೊಡಿಸಿದ ಮೇಲೆ ಸಹೋದರನ ಕಡೆಯಿಂದ ವಸ್ತು ಅಥವಾ ಹಣದ ರೂಪದಲ್ಲಿ ಉಡುಗೊರೆಯನ್ನು ಸ್ವೀಕರಿಸುವುದು ಹಿಂದಿನಿಂದಲೂ ನಡೆದುಕೊಂಡುಬಂದ ಸಂಪ್ರದಾಯ.
ಆನ್ಲೈನ್ ವ್ಯಾಪಾರದ ಭರಾಟೆಯ ನಡುವೆಯೂ ತಾಲ್ಲೂಕಿನಲ್ಲಿ ಸ್ಥಳೀಯವಾಗಿ ರಾಖಿ ಖರೀದಿಗೆ ಜನರು ಹೆಚ್ಹು ಆಸಕ್ತಿ ತೋರುತ್ತಾರೆ ಎನ್ನುವ ಕಾರಣಕ್ಕೆ ಈಗಾಗಲೇ ಬಗೆ ಬಗೆಯ ವರ್ಣ ರಂಜಿತ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಬಾರಿ ಮುಂಬೈ ಗುಜರಾತ್ ಮೂಲದಿಂದ ರಾಖಿ ಖರೀದಿಸಿ ವ್ಯಾಪಾರಕ್ಕೆ ತರಲಾಗಿದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.