ಯಕ್ಷಗಾನ, ಸಂಗೀತ, ಸಾಹಿತ್ಯ ಮುಂತಾದ ಕಲೆಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಧನವಾಗಿದೆ -ಮುಕ್ತಾ ಶಂಕರ

ಯಲ್ಲಾಪುರ: ಯಕ್ಷಗಾನ, ಸಂಗೀತ, ಸಾಹಿತ್ಯ ಮುಂತಾದ ಕಲೆಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಧನವಾಗಿದೆ ಎಂದು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಹೇಳಿದರು.
ಅವರು ಪಟ್ಟಣದ ರವೀಂದ್ರ ನಗರದ ಶಕ್ತಿಗಣಪತಿ ದೇವಸ್ಥಾನದಲ್ಲಿ ‘ಹವ್ಯಾಸಿ ಯಕ್ಷಗಾನ ಒಕ್ಕೂಟ’ ವನ್ನು ಉದ್ಘಾಟಿಸಿ, ಮಾತನಾಡಿದರು. ಕನ್ನಡದ ಬಗ್ಗೆ ಮಾತನಾಡುವ ನಾವು, ಕೆಲವು ಸಂದರ್ಭಗಳಲ್ಲಿ ಅನ್ಯ ಭಾಷೆಯ ಶಬ್ದಗಳನ್ನು ಬಳಸಲೇಬೇಕಾದ ಅನಿವಾರ್ಯತೆಯಿದೆ. ಆದರೆ ಯಕ್ಷಗಾನದಲ್ಲಿ ಮಾತ್ರ ಪರಿಶುದ್ಧ ಕನ್ನಡ ಉಳಿದುಕೊಂಡಿದೆ ಎಂದರು
ಧರ್ಮಸ್ಥಳ ಮೇಳದ ಭಾಗವತ ದಿನೇಶ ಭಟ್ಟ ಅಬ್ಬಿತೋಟ ಇದ್ದರು. ನಂತರ ಒಕ್ಕೂಟದ ಕಲಾವಿದರಿಂದ ಕೃಷ್ಣ ಸಂಧಾನ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಭಾಗ್ವತ್ ಮತ್ತು ನಾಗೇಂದ್ರ ಭಟ್ಟ ಶೇಡಿಜಡ್ಡಿ, ಮದ್ದಲೆವಾದಕರಾಗಿ ಗಣಪತಿ ದುರ್ಗದ, ಅರ್ಥಧಾರಿಗಳಾಗಿ ವಿದ್ವಾನ್ ವೆಂಕಟರಮಣ ಭಟ್ಟ ಸೂಳಗಾರ, ಗಣಪತಿ ಭಾಗ್ವತ್ ಶಿಂಬ್ಳಗಾರ, ನಾಗರಾಜ ಹೆಗಡೆ ಮತ್ತು ಮಂಜುನಾಥ ಹೆಬ್ಬಾರ ಭಾಗವಹಿಸಿದ್ದರು.