ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಬಿಜೆಪಿ ಮಂಡ್ಯದ ಬೆಂಗಳೂರು – ಮೈಸೂರು ಹಳೆ ಹೆದ್ದಾರಿಯಲ್ಲಿ ಹುರುಳಿ ಬಿತ್ತಿ ಪ್ರತಿಭಟನೆ ನಡೆಸಿದೆ.
ಸಂಜಯ್ ಸರ್ಕಲ್‍ನಲ್ಲಿ ಸಂಸದೆ ಸುಮಲತಾ ಅಂಬರೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಮಾಜಿ ಸಿಎಂ ಸದಾನಂದಗೌಡ, ಮಾಜಿ ಸಚಿವ ಅಶ್ವತ್ಥ್ ನಾರಾಯಣ್, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಇನ್ನಿತರ ಬಿಜೆಪಿ ಮುಖಂಡರು ಭಾಗಿಯಾಗಲಿದ್ದಾರೆ.ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ಗೌಡ, ರಾಜ್ಯ ಸರ್ಕಾರಕ್ಕೆ ನಮ್ಮ ರಾಜ್ಯದ ರೈತರ ಹಿತ ಬೇಕಾಗಿಲ್ಲ. ವಾಸ್ತವ ಸ್ಥಿತಿಯನ್ನು ಕೋರ್ಟ್‍ಗೆ ಅರ್ಥ ಮಾಡಿಸದೇ ನೀರು ಬಿಟ್ಟಿದ್ದಾರೆ. ತಮಿಳುನಾಡು ಅರ್ಜಿ ಹಾಕಿದ ತಕ್ಷಣವೇ ನೀರು ಬಿಡುವ ಅಗತ್ಯ ಏನಿತ್ತು? ಲೋಕಸಭಾ ಚುನಾವಣಾ ದೃಷ್ಟಿಯಿಂದ ಕಾಂಗ್ರೆಸ್ ರೈತರ ಹಿತ ಬಲಿಕೊಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರತಿಭಟನೆ ವೇಳೆ ಕಿವಿಗೆ ಹೂ ಇಟ್ಟುಕೊಂಡು, ಬಾಯಿ ಬಡಿದುಕೊಂಡು ತಮಿಳಿನಾಡಿಗೆ ನೀರು ಹರಿಸುವುದನ್ನು ನಿಲ್ಲುಸುವಂತೆ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಇದೇ ವೇಳೆ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಉರುಳು ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಸ್ತೆ ಮಧ್ಯೆ ಬೆಂಕಿ ಹಾಕಿ ಸರ್ಕಾರಕ್ಕೆ ಚುರುಕು ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ.ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಂಜಯ್ ಸರ್ಕಲ್‍ನಲ್ಲಿ 4 ಡಿಎಆರ್ ತುಕಡಿ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಪ್ರತಿಭಟನೆ ವೇಳೆ ಯಾವುದೇ ಅವಘಡಗಳು ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. ಮಂಡ್ಯದಲ್ಲಿ ಕಾವೇರಿದ ಹಿನ್ನೆಲೆಯಲ್ಲಿ ಐಜಿ ಬೋರಲಿಂಗಯ್ಯ ಬೇಟಿ ನೀಡಿ ಪೊಲೀಸ್ ಬಂದೋಬಸ್ತ್ ಪರಿಶೀಲನೆ ನಡೆಸಿದ್ದಾರೆ.