ಮಳೆ ಬಂದು ನಾಗರ ಕಲ್ಲು ತೊಳೆದು ಆಯ್ತು ಇನ್ನೂ ಪೂಜೆ ಆಗಿಲ್ಲ! ಹೀಗೆ ಹಣ್ಣು ಕಾಯಿ ತಯಾರಿ ಮಾಡ್ಕೊಳ್ತ ಹಿರಿಕರು ನಾಗರ ಪಂಚಮಿಯಂದು ಸಾಮಾನ್ಯವಾಗಿ ಹೇಳುವ ಮಾತಿದು.ಹೀಗೆ ಮಲೆನಾಡಿನಲ್ಲಿ ನಾಗರ ಪಂಚಮಿಯ ದಿನ ಮಳೆ ಬಂದೇ ಬರುತ್ತೆ. ಮಳೆ ನಾಗರಕಲ್ಲನ್ನು ತೊಳೆದ ಬಳಿಕ ಪೂಜೆ ನಡೆಸಲಾಗುತ್ತದೆ. ಈ ನಂಬಿಕೆ ನಮ್ಮ ಜನರ ಮತ್ತು ಪ್ರಕೃತಿಯ ನಡುವಿನ ಆಳವಾದ ಸಂಬಂಧ ಯಾವ ಮಟ್ಟದ್ದು ಎಂಬುದಕ್ಕೆ ಸಾಕ್ಷಿ ಕೂಡ ಹೌದು. ಊರ ಹೊರಗಿನ ಕಾಡಿನ ಭಾಗದಲ್ಲಿರುವ ನಾಗರ ಕಟ್ಟೆಗೆ ಅಥವಾ ಅರಳಿ ಮರದ ಕೆಳಗಿನ ನಾಗರ ಮೂರ್ತಿಗೆ ಪೂಜೆ ಮಾಡಲಾಗುತ್ತದೆ. ಈ ಹಬ್ಬ ಪ್ರಕೃತಿಯ ಆರಾಧನೆ ಒಂದು ಭಾಗವಾಗಿ ಮಲೆನಾಡಲ್ಲಿ ಕಂಡು ಬರುತ್ತದೆ. ಹಾಗೆ ನಾಗನಿಗೆ ಮಲೆನಾಡಿನ ಭಾಗದಲ್ಲಿ ಗುಡಿಗಳು ಕಡಿಮೆ. ಹಾಗೆ ನೆಲದ ಮೇಲೋ, ಅಥವ ಕಟ್ಟೆಯ ಮೇಲೆ ನಾಗರ ಕಲ್ಲುಗಳಿರುತ್ತವೆ. ಶತಶತಮಾನದ ನಾಗರ ಕಲ್ಲುಗಳು ಮಲೆನಾಡಿನ ಮೂಲೆ ಮೂಲೆಯಲ್ಲೂ ಕಾಣ ಸಿಗುತ್ತವೆ. ಅವು ಎಷ್ಟರ ಮಟ್ಟಿಗೆ ಹಳೆಯದ್ದು ಎಂದರೆ ಸವೆದು ಪೆನ್ಸಿಲ್‍ನ ಗೆರೆಯಂತೆ ಕಾಣುವ ಕಲ್ಲುಗಳು ಇವೆ! ಅವುಗಳನ್ನು ಯಾವುದೇ ರೀತಿಯ ಪುನರ್‍ನಿರ್ಮಾಣ ಮಾಡಲಾಗುವುದಿಲ್ಲ. ಅವು ಇದ್ದಂತೆಯೇ ಪೂಜೆಗಳು ನಡೆಯುತ್ತವೆ. ನಾಗರ ಪಂಚಮಿ ಬಳಿಕ ದೀಪಾವಳಿಗೆ ಇದೇ ನಾಗರ ಕ್ಲಲುಗಳಿಗೆ ಪೂಜೆ ನಡೆಯುತ್ತದೆ. ಬಳಿಕ ಒಂದು ವರ್ಷದ ವರೆಗೂ ಯಾವ ಪೂಜೆಗಳನ್ನು ಇವುಗಳಿಗೆ ಮಾಡಲಾಗುವುದಿಲ್ಲ. ಮತ್ತೆ ನಾಗರ ಪಂಚಮಿಗೆ ಅವುಗಳಿಗೆ ಪೂಜೆ ಮತ್ತು ನೈವೇದ್ಯ!ಆದಿನದ ವಿಶೇಷವಾಗಿ ಪೂಜೆಗೆ ಹೂವು, ಹಣ್ಣು, ಹಾಲು ಹಾಗೂ ನೈವೇದ್ಯಕ್ಕೆ ರವೆ ಉಂಡೆ ಇಡಲಾಗುತ್ತದೆ. ಕೇದಿಗೆ ಹೂವು ವಿಶೇಷವಾಗಿ ಪೂಜೆಗೆ ಬಳಕೆ ಆಗುತ್ತದೆ. ಇನ್ನೂ ಹುತ್ತದ ಆರಾಧನೆ ಎಲ್ಲೂ ಕಂಡು ಬರುವುದಿಲ್ಲ. ಆ ದಿನ ರಾತ್ರಿ ಕೈಗೆ ಮದರಂಗಿ ಹಚ್ಚುವಂಥಹ ಪದ್ಧತಿ ಇದೆ. ಈ ಬಗ್ಗೆ ಒಂದು ಮಾತಿದೆ, ಹಾವಿನ ಹಬ್ಬದಲ್ಲಿ ಹಚ್ಚಿದ ಮದರಂಗಿ ಗೋವಿನ ಹಬ್ಬದ ತನಕ ಇರಬೇಕು ಎನ್ನಲಾಗುತ್ತದೆ. ಗೋವಿನ ಹಬ್ಬ ಎಂದರೆ ದೀಪಾವಳಿ, ಮಲೆನಾಡಲ್ಲಿ ದೀಪಾವಳಿಯ ದಿನ ಗೋವಿನ ಪೂಜೆ ಮಾಡಲಾಗುತ್ತದೆ.ನಾಗ ದೇವರನ್ನು ವಿಶೇಷವಾಗಿ ಮಕ್ಕಳಿಲ್ಲದವರು ಪ್ರಾರ್ಥಿಸಿದರೆ ಸಂತಾನ ಭಾಗ್ಯ ಸಿಗಲಿದೆ ಎಂಬ ನಂಬಿಕೆ ಜನರಲ್ಲಿದೆ. ಮನೆಯ ಒಳಗಡೆ ನಾಗನನ್ನು ಪ್ರಾರ್ಥಿಸಲಾಗುತ್ತದೆ. ಆದರೆ ವಿಶೇಷವಾಗಿ ಮನೆಯ ಒಳಭಾಗದಲ್ಲಿ ನಾಗನನ್ನು ಪೂಜಿಸುವ ಪದ್ಧತಿ ಇಲ್ಲ.