ಮಂಗಳೂರು: ರಾಜ್ಯದಲ್ಲಿ ಪಡಿತರ ಅಕ್ಕಿ ವಿತರಣೆ ವಿಚಾರವಾಗಿ ಯುದ್ಧವೇ ನಡೆದಿದೆ. ಅನ್ನಭಾಗ್ಯ ಯೋಜನೆ ಅಡಿ ರಾಜ್ಯ ಸರ್ಕಾರ 10 ಕೇಜಿ ಅಕ್ಕಿ ನೀಡಲು ಘೋಷಿಸಿತ್ತು. ಈಗ ನೀಡುತ್ತಿರುವ ಐದು ಕೇಜಿ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ ಐದು ಕೇಜಿ ಅಕ್ಕಿ ನೀಡಲು ನಿರ್ಧರಿಸಿತ್ತು. ಆದರೆ ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಕ್ಕಿಯ ಬದಲಾಗಿದೆ ಹಣ ನೀಡುತ್ತಿದೆ. ಒಂದು ಕಡೆ ಅಕ್ಕಿ ಇಲ್ಲವೆಂದು ಪೇಚಾಡುವ ಸರ್ಕಾರಕ್ಕೆ ತನ್ನದೇ ಗೋದಾಮಿನಿಂದ ಅಕ್ಕಿ ಕಳುವುವಾಗುತ್ತಿರುವುದು ತಿಳಿದಿದೆಯೋ ಇಲ್ಲೋ. ಹೌದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿದ್ದ ಕೋಟ್ಯಾಂತರ ಮೌಲ್ಯದ ಪಡಿತರ ಅಕ್ಕಿ ನಾಪತ್ತೆಯಾಗಿದೆ.
ಬರೊಬ್ಬರಿ 1.32 ಕೋಟಿ ಮೌಲ್ಯದ 3892 ಕ್ವಿಂಟಾಲ್ ಅಕ್ಕಿ ನಾಪತ್ತೆಯಾಗಿದ್ದು, ಫಿಸ್ಟ್ ತಂತ್ರಾಂಶದಲ್ಲಿ ದಾಸ್ತಾನು ಪರಿಶೀಲಿಸಿದಾಗ ಗೋಲ್ಮಾಲ್ ಪತ್ತೆಯಾಗಿದೆ. ಪಡಿತರ ಅಕ್ಕಿ ಅವ್ಯವಹಾರದ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮಂಗಳೂರು ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ಹೋಂಡಾ ಗೋದಾಮಿನ ನಿರ್ವಾಹಕ ವಿಜಯ್ ವಿರುದ್ಧ ದೂರು ನೀಡಿದ್ದಾರೆ. ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.