ಯಲ್ಲಾಪುರ:
ಮಕ್ಕಳು ಶ್ರಮಪಟ್ಟು ಓದಿದಾಗ ಮಾತ್ರ ಶಿಕ್ಷಕರು, ಪಾಲಕರ ತ್ಯಾಹ, ಶ್ರಮ ಸಾರ್ಥಕವಾಗುತ್ತದೆ ಎಂದು ಟಿ.ಎಂ.ಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ ಹೇಳಿದರು.
ಅವರು ತಾಲೂಕಿನ ನಂದೊಳ್ಳಿ ಸ.ಹಿ.ಪ್ರಾ ಶಾಲೆಯಲ್ಲಿ ಮಾಗೋಡಿನ ಇಬ್ಬನಿ ಫೌಂಡೇಷನ್ ವತಿಯಿಂದ ಸಹಸ್ರ ಪುಸ್ತಕ ಅಭಿಯಾನದ ಪ್ರಯುಕ್ತ ಹಮ್ಮಿಕೊಂಡಿದ್ದ ನೋಟ್ ಬುಕ್ ಹಾಗೂ ಪಠ್ಯ ಪರಿಕರಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿ ಮಾತನಾಡಿದರು. ಹಣ ಇದ್ದವರಿಗೆಲ್ಲ ದಾನ ಮಾಡುವ ಮನಸ್ಸಿರುವುದಿಲ್ಲ. ತಾನು ಹುಟ್ಟಿದ ಊರು, ಬೆಳೆದ ಸಮಾಜಕ್ಕೆ ಕೊಡುಗೆ ನೀಡುವ ಮನಸ್ಸು ನಮ್ಮದಾಗಬೇಕೆಂದರು.
ಟಿಎಂಎಸ್ ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ ಮಾತನಾಡಿ, ಇಬ್ಬನಿ ಫೌಂಡೇಷನ್ ಶಿಕ್ಷಣ, ಪರಿಸರ, ಕಲೆ, ಸಂಸ್ಕೃತಿಯನ್ನು ಬಿಂಬಿಸುವ ವಿಧಾಯಕ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ ಎಂದರು.
ಫೌಂಡೇಷನ್ ಅಧ್ಯಕ್ಷ ವಿ.ಎನ್.ಹೆಗಡೆ ಹಾದಿಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಪ್ರತಿ ವರ್ಷ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಅಳಿಲು ಸೇವೆ ಮಾಡುತ್ತಿದೆ. ಅದರಂತೆ ಈ ವರ್ಷ ಸಹಸ್ರ ಪುಸ್ತಕ ಅಭಿಯಾನ ಹಾಗೂ ಪಠ್ಯಪರಿಕರಗಳನ್ನು ವಿತರಿಸುವ ಯೋಜನೆ ಹಮ್ಮಿಕೊಂಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಕ್ಲಸ್ಟರ್ ಮಟ್ಟದ ಚೆಸ್ ಹಾಗೂ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೂ ಪಠ್ಯ ಪರಿಕರಗಳನ್ನು ಹಾಗೂ ವಿಜೇತರಿಗೆ ಬಹುಮಾನವನ್ನು ಫೌಂಡೇಷನ್ ವತಿಯಿಂದ ವಿತರಿಸಲಾಯಿತು.
ಗ್ರಾ.ಪಂ ಅಧ್ಯಕ್ಷೆ ಭವಾನಿ ಸಿದ್ದಿ ಅಧ್ಯಕ್ಷತೆ ವಹಿಸಿದ್ದರು. ಸಿ.ಆರ್.ಪಿಗಳಾದ ಶಿವಾನಂದ ವೆರ್ಣೆಕರ್, ಮೋಹನ ನಾಯ್ಕ, ಇಬ್ಬನಿ ಫೌಂಡೇಷನ್ ನ ಪ್ರಮುಖರಾದ ನರಸಿಂಹ ಹೆಗಡೆ ಹಾದಿಮನೆ, ಶ್ರೀನಿವಾಸ ಹೆಗಡೆ ಇತರರಿದ್ದರು. ಮುಖ್ಯಾಧ್ಯಾಪಕ ಭಾಸ್ಕರ ನಾಯ್ಕ, ಶಿಕ್ಷಕರಾದ ಅಕ್ಷಯ ನಾಯ್ಕ, ಪ್ರತಿಭಾ ಹೆಗಡೆ ನಿರ್ವಹಿಸಿದರು