ಯಲ್ಲಾಪುರ ರಸ್ತೆಯ ಧೂಳಿನ ಗೋಳಿಗೆ ಲೋಕೋಪಯೋಗಿ ಇಲಾಖೆ ಮುಕ್ತಿ ನೀಡಲು ಮುಂದಾಗಿದ್ದು, ಟ್ರ್ಯಾಕ್ಟರ್ ಬಳಸಿ ವಾಕ್ಯೂಮರ್ ಮೂಲಕ ಧೂಳು ಸ್ವಚ್ಛಗೊಳಿಸುವ ಕಾರ್ಯ

ಯಲ್ಲಾಪುರ : ಪಟ್ಟಣದಲ್ಲಿ ಬೆಲ್ ರಸ್ತೆಯ ಧೂಳಿನ ಗೋಳಿಗೆ ಲೋಕೋಪಯೋಗಿ ಇಲಾಖೆ ಮುಕ್ತಿ ನೀಡಲು ಮುಂದಾಗಿದ್ದು, ಟ್ರ್ಯಾಕ್ಟರ್ ಬಳಸಿ ವಾಕ್ಯೂಮರ್ ಮೂಲಕ ಧೂಳು ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಲಾಗಿದೆ.
ಅಂಬೇಡ್ಕರ್ ಸರ್ಕಲ್ ದಿಂದ ಸಬಗೇರಿವರೆಗಿನ ವೆಲ್ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿಯನ್ನು ಕಳೆದ ಫೆಬ್ರುವರಿ ತಿಂಗಳಲ್ಲಿ ಕೈಗೊಳ್ಳಲಾಗಿತ್ತು. ಫೆಬ್ರುವರಿ ತಿಂಗಳಲ್ಲಿ ನಡೆದ ಗ್ರಾಮದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ತರಾತುರಿಯಲ್ಲಿ ಕಾಮಗಾರಿ ನಡೆಸಲಾಗಿತ್ತು. ಶಾಸಕರ ಸೂಚನೆಯ ಮೇರೆಗೆ ಗುತ್ತಿಗೆದಾರರೊಬ್ಬರು ವೈಯಕ್ತಿಕವಾಗಿ ಈ ಕಾಮಗಾರಿ ಕೈಗೊಂಡಿದ್ದರು.
ಮೊದಲ ಮಳೆಗೇ ರಸ್ತೆಯ ಕಡಿ ಕಿತ್ತೆದ್ದು ಹೋಗಿದ್ದು, ಧೂಳು, ರಾಡಿಯಿಂದ ಸವಾರರು ಹಾಗೂ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗಿತ್ತು. ರಸ್ತೆಯ ಮೇಲ್ಪದರು ಕಿತ್ತು ಜಲ್ಲಿ ಹರಡಿ, ಹೊಂಡ ಉಂಟಾಗಿತ್ತು. ಇಲ್ಲಿ ಬೈಕ್ ಮೇಲೆ ಓಡಾಡುವುದೆಂದರೆ, ಬ್ರೇಕ್ ಡಾನ್ಸ್ ಮಾಡಿದಂತೆ ಆಗಿದೆ ಎಂದು ಜನರು ಆಡಿಕೊಳ್ಳುವಂತಾಗಿತ್ತು.‌ ಮಳೆ ಕಡಿಮೆ ಇದ್ದಾಗ ವ್ಯಾಪಕ ಧೂಳು ಕಿರಿಕಿರಿ ಉಂಟಾಗಿತ್ತು. ದೊಡ್ಡಗಾತ್ರದ ವಾಹನಗಳು ಹೋದರೆ, ಧೂಳು ಹರಡಿ ಮೂಗು ಮುಚ್ಚಿಯೇ ಓಡಾಡಬೇಕಾದ ಸ್ಥಿತಿ ತಲೆದೋರಿ ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.
ಕೊನೆಗೂ ಜನರ ಗೋಳಿಗೆ ಇಲಾಖೆ ಸ್ಪಂದಿಸಿದ್ದು, ಧೂಳು ಸ್ವಚ್ಛಗೊಳುಸಲು ಮುಂದಾಗಿದೆ. ರಸ್ತೆಯ ಹೊಂಡ ಮುಚ್ಚುವುದಕ್ಕೂ ಕ್ರಮ ಕೈಗೊಂಡರೆ ಸಮಸ್ಯೆ ಸಂಪೂರ್ಣ ನಿವಾರಣೆಯಾದಂತೆ ಎಂಬುದು ಸ್ಥಳೀಯರ ಆಗ್ರಹ.