ಯಲ್ಲಾಪುರ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಸಮೃದ್ಧಿ ಇಕೋ ಕ್ಲಬ್ ಅಡಿಯಲ್ಲಿ ಫುಡ್ ಫೆಸ್ಟ್ ಕಾರ್ಯಕ್ರಮ.


ಯಲ್ಲಾಪುರ : ತಾಲೂಕಿನ ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಸಮೃದ್ಧಿ ಇಕೋ ಕ್ಲಬ್ ಅಡಿಯಲ್ಲಿ ಫುಡ್ ಫೆಸ್ಟ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ, ಆಹಾರ ನಮ್ಮ ಬಹುಮುಖ್ಯ ಅಗತ್ಯತೆಗಳಲ್ಲೊಂದು. ಅದರ ಬಗ್ಗೆ ಅರಿತುಕೊಳ್ಳುವುದು ತುಂಬಾ ಅವಶ್ಯಕ. ಜಂಕ್ ಫುಡ್ ಗಳ ಸೇವನೆಯಿಂದ ಆರೋಗ್ಯ ಹಾಳು ಮಾಡಿಕೊಳ್ಳುವುದು ಹೆಚ್ಚುತ್ತಿದೆ. ಪೋಷಕಾಂಶಯುಕ್ತ ಆಹಾರ ಸೇವನೆಯ ಬಗ್ಗೆ ವಿದ್ಯಾರ್ಥಿಗಳಿದ್ದಾಗಿನಿಂದಲೇ ಅರಿಯುವುದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು. ವಿದ್ಯಾರ್ಥಿಗಳಿಂದ ಪೋಷಕಾಂಶಯುಕ್ತ ಆಹಾರದ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಹಲವು ವಿಧಗಳ ಮೊಳಕೆ ಕಾಳುಗಳು,ಜೋಳದ ರೊಟ್ಟಿ, ಹಸಿ ತರಕಾರಿಗಳು, ಫ್ರುಟ್ ಸಲಾಡ್,ವಿಧವಿಧದ ಸ್ವೀಟ್ ಗಳು,ಸ್ಥಳೀಯ ಸಿಹಿ ಖಾದ್ಯಗಳು,ಸ್ಥಳೀಯ ಹಣ್ಣುಗಳು,ಪೋಷಕಾಂಶ ಯುಕ್ತ ಪಲ್ಯಗಳನ್ನು ವಿದ್ಯಾರ್ಥಿಗಳು ಮನೆಯಲ್ಲಿಯೇ ತಯಾರಿಸಿ ತಂದು ಮಾರಾಟ ಮಾಡಿದರು.
ಪೋಷಕಾಂಶಯುಕ್ತ ಆಹಾರಗಳ ಬಗ್ಗೆ ಅರಿಯುವುದರ ಜೊತೆಯಲ್ಲಿ ಮಾರುಕಟ್ಟೆ ಸ್ವರೂಪ ಮತ್ತು ನಿರ್ವಹಣೆ,ವ್ಯಾಪಾರದ ವಿವಿಧ ವಿಧಾನಗಳ ಕುರಿತಾಗಿಯೂ ಅರಿತರು. ಮಕ್ಕಳಿಗೆ ಪಾಲಕರೂ ಸಹಕರಿಸಿದರು. ವಿ ಕೆ ಗಾಂವ್ಕಾರ್, ಶಿಕ್ಷಕರಾದ ಲತಾ ಹೆಗಡೆ, ರಾಘವೇಂದ್ರ ಹೆಗಡೆ ಇತರರಿದ್ದರು.