ಹತ್ತು ಹಲವು ಚರ್ಚೆಗೆ ಕಾರಣವಾದ ಅಮಿತ್ ಶಾ, ದೇಶಪಾಂಡೆ ಭೇಟಿ

ಹಳಿಯಾಳ : ರಾಜ್ಯದ ಪ್ರಭಾವಿ ರಾಜಕಾರಣಿ, 9 ಬಾರಿ ವಿಧಾನಸಭಾ ಶಾಸಕರಾಗಿ ಆಯ್ಕೆಯಾಗಿರುವ ಆರ್.ವಿ.ದೇಶಪಾಂಡೆಯವರು ಕೇಂದ್ರದ ಗ್ರಹ ಸಚಿವರಾದ ಅಮಿತ್ ಶಾ ಅವರನ್ನು ಭೇಟಿಯಾಗಿರುವ ವಿಚಾರ ರಾಜಕೀಯವಾಗಿ ಬಹಳಷ್ಟು ಚರ್ಚೆಗೆ ಕಾರಣವಾಗಿದೆ.

ಇನ್ನೇನೂ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೆ ದೇಶಪಾಂಡೆಯವರ ಅಮಿತ್ ಶಾ ಭೇಟಿ ಹತ್ತು ಹಲವು ಚರ್ಚೆಗೂ ಕಾರಣವಾಗಿದೆ. ಪುತ್ರ ಪ್ರಶಾಂತ್ ದೇಶಪಾಂಡೆ ಅವರನ್ನು ಬರಲಿರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ನಿಲ್ಲಿಸಬಹುದೇ ಎನ್ನುವ ಕುತೂಹಲವು ಕ್ಷೇತ್ರದಲ್ಲಿ ಮನೆ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೂ ಹಿರಿಯ ರಾಜಕಾರಣಿ ದೇಶಪಾಂಡೆ ಅವರಿಗೆ ಸಚಿವ ಪದವಿಯನ್ನು ನೀಡದಿರುವುದು ಕ್ಷೇತ್ರದ ಕಾಂಗ್ರೆಸ್ಸಿಗರಿಗೆ ಬೇಸರವನ್ನು ತರಿಸಿದೆ. ಹಾಗಾಗಿ ಪುತ್ರನನ್ನು ಬಿಜೆಪಿಗೆ ಕಳುಹಿಸಿ ಆ ಪಕ್ಷದಿಂದ ಕೆನರಾ ಲೋಕಸಭಾ ಕ್ಷೇತ್ರಕ್ಕೆ ನಿಲ್ಲಿಸುವ ತಂತ್ರವೇ ಎಂಬ ಜಿಜ್ಞಾಸೆಯು ರಾಜಕೀಯ ಕಟ್ಟೆಯಲ್ಲಿ ನಡೆಯುತ್ತಿದೆ.

ಯಾವುದೇ ಸಚಿವಗಿರಿ ಇಲ್ಲದೆಯೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಆರ್.ವಿ.ದೇಶಪಾಂಡೆ ಅವರು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲವನ್ನು ಕೆರಳಿಸಿದೆ.