ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಮೃತಪಟ್ಟು ಇಂದಿಗೆ (ಆಗಸ್ಟ್ 11) ಐದು ದಿನ ಕಳೆದಿದೆ. ಅವರ ಅಂತ್ಯ ಸಂಸ್ಕಾರ ನಡೆದು ಮೂರು ದಿನ ಪೂರ್ಣಗೊಂಡಿದೆ. ಸ್ಪಂದನಾ ಕುಟುಂಬಸ್ಥರಿಂದ ಹಾಲುತುಪ್ಪ ಬಿಡುವ ಕಾರ್ಯ ಇಂದು ನಡೆಯಲಿದೆ. ಶ್ರೀರಾಮಪುರದ ಹರಿಶ್ಚಂದ್ರಘಾಟ್ನಲ್ಲಿ ಕುಟುಂಬಸ್ಥರ ಪೂಜೆ ಮಾಡಲಿದ್ದಾರೆ. ಅಸ್ಥಿ ಬಿಡುವ ಕಾರ್ಯಕ್ಕೂ ಮುನ್ನ ಕುಟುಂಬಸ್ಥರಿಂದ ಪೂಜೆ ನಡೆಯಲಿದೆ. ವಿಜಯ್ ರಾಘವೇಂದ್ರ ಶಿವರಾಂ ಕುಟುಂಬಸ್ಥರು ಪೂಜೆಯಲ್ಲಿ ಭಾಗಿ ಆಗಲಿದ್ದಾರೆ.
ಸ್ಪಂದನಾ ಅವರು ಆಗಸ್ಟ್ 6ರ ರಾತ್ರಿ ನಿಧನ ಹೊಂದಿದರು. ಅವರು ಬ್ಯಾಂಕಾಕ್ಗೆ ತೆರಳಿದ್ದ ವೇಳೆ ಹೃದಯಾಘಾತ ಆಯಿತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನ ಆಗಿಲ್ಲ. ಕುಟುಂಬದವರು ಬ್ಯಾಂಕಾಕ್ಗೆ ತೆರಳಿ ಸ್ಪಂದನಾ ಪಾರ್ಥಿವ ಶರೀರವನ್ನು ತೆಗೆದುಕೊಂಡು ಬಂದರು. ಆಗಸ್ಟ್ 9ರಂದು ಬೆಂಗಳೂರಿನ ಶ್ರೀರಾಮಪುರದ ಹರಿಶ್ಚಂದ್ರಘಾಟ್ನಲ್ಲಿ ಸ್ಪಂದನಾ ಅಂತ್ಯಕ್ರಿಯೆ ಮಾಡಾಗಿದೆ. ಇಂದು ಪೂಜೆ ನಡೆಯಲಿದೆ. ಸ್ಪಂದನಾಗೆ ಇಷ್ಟವಾದ ಪದಾರ್ಥಗಳನ್ನಿಟ್ಟು ಕುಟುಂಬದವರು ಪೂಜೆ ಮಾಡಲಿದ್ದಾರೆ.
ಅಸ್ಥಿ ಬಿಡುವ ಕಾರ್ಯ
ವಿಜಯ್ ರಾಘವೇಂದ್ರ ಅವರ ಮಗ ಶೌರ್ಯ ಅವರು ಪೂಜೆ ನೆರವೇರಿಸಲಿದ್ದಾರೆ. ಪೂಜೆ ಬಳಿಕ ಕುಟುಂಬ ಸ್ಪಂದನಾ ಅಸ್ಥಿಯೊಂದಿಗೆ ಶ್ರೀರಂಗಪಟ್ಟಣಕ್ಕೆ ತೆರಳಲಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸ್ನಾನಘಟ್ಟದಲ್ಲಿ ಹಾದು ಹೋದ ಕಾವೇರಿ ನದಿಯಲ್ಲಿ ಕುಟುಂಬ ಅಸ್ಥಿ ಬಿಡಲಿದೆ. ಈ ಕಾರ್ಯದಲ್ಲಿ ಕುಟುಂಬದ 50 ಜನರು ಭಾಗಿ ಆಗಲಿದ್ದಾರೆ. ಬೆಳಗ್ಗೆ 11 ನಂತರ ಕಾರ್ಯಕ್ರಮ ನಡೆಯಲಿದೆ.
ಪ್ರಾಮುಖ್ಯತೆ ಏನು?
ಕಾವೇರಿ ನದಿಯಲ್ಲಿ ಅದರಲ್ಲೂ ಶ್ರೀರಂಗಪಟ್ಟಣದಲ್ಲಿ ಅಸ್ಥಿ ಬಿಟ್ಟರೆ ಮೃತರಿಗೆ ಮುಕ್ತಿ ಸಿಗಲಿದ ಎಂಬ ನಂಬಿಕೆ ಹಿಂದೂ ಸಂಪ್ರದಾಯದಲ್ಲಿ ಇದೆ. ಹೀಗಾಗಿ, ಇಲ್ಲಿ ಅಸ್ಥಿ ಬಿಡಲು ಕುಟುಂಬದವರು ನಿರ್ಧರಿಸಿದ್ದಾರೆ.ವಿಜಯ್ ರಾಘವೇಂದ್ರ, ಶೌರ್ಯ, ಶ್ರೀಮುರಳಿ, ಸ್ಪಂದನಾ ತಂದೆ ಶಿವರಾಂ ಸೇರಿ ಕುಟುಂಬದ ಯಾರಿಗೂ ದುಃಖ ಕಡಿಮೆ ಆಗಿಲ್ಲ. ಸ್ಪಂದನಾ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳೋಕೆ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಈ ನೋವಿನಲ್ಲೇ ಅಸ್ಥಿ ಬಿಡುವ ಕಾರ್ಯ ನಡೆಯಲಿದೆ.