ಭಟ್ಕಳ: ಸಿಟಿಜನ್ ಕನ್ನಡ, ಸಿಟಿಜನ್ ಇಂಡಿಯಾ ಸಮೂಹ ಮಾಧ್ಯಮ ಸಂಸ್ಥೆ ಬೆಂಗಳೂರು, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಬೆಂಗಳೂರು ಹಾಗೂ ವಿಶ್ವವಿದ್ಯಾಲಯ ಕಾನೂನು ಕಾಲೇಜು ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ “ನಾಗರಿಕ ಯುವ ಸಂಸತ್ತು” ಸ್ಪರ್ಧೆಯಲ್ಲಿ ಭಟ್ಕಳದ ತಿರುಮಲ ನಾಯ್ಕ ತೃತೀಯ ಸ್ಥಾನ ಪಡೆದು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಬೆಂಗಳೂರಿನ ವಿಕಾಸಸೌಧದ ಕೊಠಡಿ ಸಂಖ್ಯೆ 419 ರಲ್ಲಿ ಆಗಸ್ಟ್ 4-6 ರವರೆಗೆ ಮೂರು ದಿನಗಳ ಕಾಲ ಹದಿನೆಂಟರಿಂದ ನಲವತ್ತು ವಯಸ್ಸಿನವರಿಗೆ ಮಾತ್ರ ಆಯೋಜನೆಗೊಳಿಸಲಾಗಿತ್ತು. ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ತಿರುಮಲ ನಾಯ್ಕರವರು ತಮ್ಮ ಅತ್ಯದ್ಭುತ ವಾಕ್ ಚಾತುರ್ಯದ ಮೂಲಕ ಶ್ರೇಷ್ಠವಾದ ಪ್ರದರ್ಶನ ನೀಡಿ ನೆರೆದಿದ್ದ ಸಭಿಕರ ಮನ ಗೆದ್ದಿದ್ದರು.
ರಾಜ್ಯದಾದ್ಯಂತ ಎಲ್ಲಾ ವಿಶ್ವವಿದ್ಯಾಲಯ, ಐಟಿ ಕಂಪನಿಗಳು, ವೈದ್ಯರು, ವಕೀಲರು ಹಾಗೂ ಯಶಸ್ವಿ ಉದ್ಯಮಿಗಳು ಹೀಗೆ ಸುಮಾರು ಎರಡು ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಕರೆದು, ನಂತರ ಸಂದರ್ಶನದ ಮೂಲಕ ಸುಮಾರು ಎರಡುನೂರ ಹತ್ತು ಜನರನ್ನು ಈ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಅವರುಗಳಲ್ಲಿ ಅತೀ ಉತ್ತಮ ಪ್ರದರ್ಶನ ನೀಡಿದ ಇಪ್ಪತ್ತೈದು ಜನರು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ನಾಗರಿಕ ಯುವ ಸಂಸತ್ತು ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಅಂಥವರಲ್ಲಿ ನಮ್ಮ ಉತ್ತರಕನ್ನಡ ಜಿಲ್ಲೆಯ ತಿರುಮಲ ನಾಯ್ಕ, ಭಟ್ಕಳ ಆಯ್ಕೆಯಾಗಿರುವುದು ನಮ್ಮ ಜಿಲ್ಲೆ ಹಾಗೂ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ.
ತಿರುಮಲ ನಾಯ್ಕ ಮೂಲತಃ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಗ್ರಾಮದವರು. ಪ್ರಸ್ತುತ ಬೆಳಗಾವಿಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಬಿಎ ಎಲ್ ಎಲ್ ಬಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿರುತ್ತಾರೆ. ಚಿಕ್ಕಂದಿನಲ್ಲಿಯೇ ಅತ್ಯಂತ ಚುರುಕಿನ ವಿದ್ಯಾರ್ಥಿಯಾಗಿದ್ದ ಇವರ ಹವ್ಯಾಸ ಬರವಣಿಗೆ ಮತ್ತು ಓದು. ಜಿಲ್ಲೆಯ ಪ್ರಸಿದ್ಧ ಪತ್ರಿಕೆಗಳಲ್ಲಿ ಇವರ ಲೇಖನಗಳೂ ಪ್ರಕಟಗೊಂಡಿವೆ. ಇವರು ಉತ್ತಮ ಕಾರ್ಯಕ್ರಮ ನಿರೂಪಕರೂ ಹೌದು.
ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ರಾಜ್ಯಮಟ್ಟದ ಈ ಕಾರ್ಯಕ್ರಮವನ್ನು ಸಚಿವ ಹೆಚ್.ಕೆ.ಪಾಟೀಲ್ ಗಿಡಕ್ಕೆ ನೀರುಣಿಸುವುದರ ಮೂಲಕ ಉದ್ಘಾಟಿಸಿದರು. ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮಾರೋಪ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಶ್ರೀ ರಾಜೀವ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಂಸದೀಯ ಪಟುಗಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಿದರು.
ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ತಿರುಮಲ ನಾಯ್ಕ ಅವರನ್ನು ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯ ಬಿ. ಜಯಸಿಂಹ, ಪ್ರಾಧ್ಯಾಪಕರು, ವಿದ್ಯಾರ್ಥಿವೃಂದ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. ಜೊತೆಗೆ ಉತ್ತರಕನ್ನಡ ಜಿಲ್ಲೆಯ ಹಾಗೂ ಭಟ್ಕಳ ತಾಲೂಕಿನ ಸಮಸ್ತ ನಾಗರಿಕರೂ ಕೂಡ ಇವರಿಗೆ ಅಭಿನಂದನೆ ಸಲ್ಲಿಸಿ, ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಶುಭಹಾರೈಸಿದ್ದಾರೆ. ಈ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ಕೂಡ ಪ್ರಥಮ ಸ್ಥಾನಗಳಿಸಿ, ಅಂತರಾಷ್ಟ್ರೀಯ ಮಟ್ಟಕ್ಕೂ ಆಯ್ಕೆಯಾಗಲಿ ಎನ್ನುವುದು ನಮ್ಮ ಹಾರೈಕೆ ಕೂಡ ಆಗಿದೆ.