ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿದೆ. ಚುಟುಕು ಕ್ರಿಕೆಟ್ನಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಭಾರತ ತಂಡವು ಕೆರಿಬಿಯನ್ ನಾಡಲ್ಲಿ ಕಮಾಲ್ ಮಾಡುವಲ್ಲಿ ಎಡವುತ್ತಿದೆ. ಅದರಲ್ಲೂ ಮೊದಲೆರಡು ಪಂದ್ಯಗಳಲ್ಲಿ ಭಾರತೀಯ ಬ್ಯಾಟರ್ಗಳು ಕೈಕೊಟ್ಟಿದ್ದರು. ಇದಕ್ಕೆ ಸಾಕ್ಷಿಯೇ 2 ಪಂದ್ಯಗಳಲ್ಲೂ ಭಾರತೀಯ ಬ್ಯಾಟ್ಸ್ಮನ್ಗಳು ಕಲೆಹಾಕಿದ ಮೊತ್ತ.ಮೊದಲ ಟಿ20 ಪಂದ್ಯದಲ್ಲಿ 145 ರನ್ಗಳಿಸಿ 4 ರನ್ಗಳಿಂದ ಸೋಲೊಪ್ಪಿಕೊಂಡಿದ್ದ ಟೀಮ್ ಇಂಡಿಯಾ, 2ನೇ ಪಂದ್ಯದಲ್ಲಿ ಕಲೆಹಾಕಿದ್ದು ಕೇವಲ 152 ರನ್ಗಳು. ಅಂದರೆ ಅತಿರಥ ಮಹಾರಥರು ಎನಿಸಿಕೊಂಡಿರುವ ಬ್ಯಾಟರ್ಗಳಿದ್ದರೂ ಸ್ಪರ್ಧಾತ್ಮಕ ಮೊತ್ತಗಳಿಸುವಲ್ಲಿ ಭಾರತ ತಂಡ ವಿಫಲವಾಗುತ್ತಿದೆ. ಇದಕ್ಕೆ ಒಂದು ಕಾರಣ ಉತ್ತಮ ಆರಂಭದ ವೈಫಲ್ಯತೆ.
ಆರಂಭಿಕರಿಬ್ಬರೂ ವಿಫಲ:
ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಇಶಾನ್ ಕಿಶನ್ ಹಾಗೂ ಶುಭ್ಮನ್ ಗಿಲ್ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಇಬ್ಬರಿಬ್ಬರ ಜೊತೆಯಾಟದ ಅಂಕಿ ಅಂಶಗಳು. ಅಂದರೆ ಕೊನೆಯ 8 ಇನಿಂಗ್ಸ್ಗಳನ್ನು ತೆಗೆದುಕೊಂಡರೂ ಗಿಲ್ ಹಾಗೂ ಇಶಾನ್ ಮೊದಲ ವಿಕೆಟ್ಗೆ ಕನಿಷ್ಠ 30 ರನ್ಗಳ ಜೊತೆಯಾಟವಾಡಿಲ್ಲ.
27, 12, 3, 10, 17, 7, 5, 16…ಇದು ಇಶಾನ್ ಕಿಶನ್ ಹಾಗೂ ಶುಭ್ಮನ್ ಗಿಲ್ ಅವರ ಕೊನೆಯ 8 ಟಿ20 ಇನಿಂಗ್ಸ್ಗಳ ಜೊತೆಯಾಟ. ಅಂದರೆ ಪವರ್ಪ್ಲೇನಲ್ಲೇ ಟೀಮ್ ಇಂಡಿಯಾ ಮೊದಲ ವಿಕೆಟ್ ಕಳೆದುಕೊಳ್ಳುತ್ತಿರುವುದು ಸ್ಪಷ್ಟ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ 6 ರನ್ಗಳಿಸಿ ಔಟಾದರೆ, ಶುಭ್ಮನ್ ಗಿಲ್ ಕೇವಲ 3 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು 2ನೇ ಟಿ20 ಪಂದ್ಯದಲ್ಲಿ ಶುಭ್ಮನ್ ಗಿಲ್ 7 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ಇಶಾನ್ ಕಿಶನ್ 23 ಎಸೆತಗಳನ್ನು ಎದುರಿಸಿ ಕಲೆಹಾಕಿದ್ದು ಕೇವಲ 27 ರನ್ ಮಾತ್ರ.
ಅಂದರೆ ಪವರ್ಪ್ಲೇನಲ್ಲಿ ಅಬ್ಬರಿಸುವಲ್ಲಿ ಟೀಮ್ ಇಂಡಿಯಾದ ಇಬ್ಬರು ಆರಂಭಿಕರುವ ವಿಫಲರಾಗುತ್ತಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರು ಕೂಡ ಬೇಗನೆ ವಿಕೆಟ್ ಒಪ್ಪಿಸುತ್ತಿರುವುದು ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದೆ. ಇದಾಗ್ಯೂ ಮೂರನೇ ಟಿ20 ಪಂದ್ಯದಲ್ಲಾದರೂ ಇಶಾನ್ ಹಾಗೂ ಗಿಲ್ ಭಾರತ ತಂಡಕ್ಕೆ ಶುಭಾರಂಭ ಒದಗಿಸಲಿದ್ದಾರಾ ಕಾದು ನೋಡಬೇಕಿದೆ.
ಮಾಡು ಇಲ್ಲವೇ ಮಡಿ ಪಂದ್ಯ:
ಭಾರತ-ವೆಸ್ಟ್ ಇಂಡೀಸ್ ನಡುವಣ ಮೂರನೇ ಟಿ20 ಪಂದ್ಯ ಮಂಗಳವಾರ ನಡೆಯಲಿದೆ. ಗಯಾನಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆದ್ದರೆ ಸರಣಿ ಕೆರಿಬಿಯನ್ನರ ಪಾಲಾಗಲಿದೆ. ಹೀಗಾಗಿ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ.