7 ವರ್ಷಗಳ ಬಳಿಕ ಸತತ ಗೆಲುವು ಕಂಡ ವೆಸ್ಟ್ ಇಂಡೀಸ್

ಭಾರತ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ 4 ರನ್​ಗಳ ರೋಚಕ ಜಯ ಸಾಧಿಸಿದ್ದ ವಿಂಡೀಸ್ ಪಡೆ, 2ನೇ ಪಂದ್ಯದಲ್ಲೂ ಟೀಮ್ ಇಂಡಿಯಾಗೆ 3 ವಿಕೆಟ್​ಗಳಿಂದ ಸೋಲುಣಿಸಿದೆ. ಈ ಮೂಲಕ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಮೇಲುಗೈ ಸಾಧಿಸಿದೆ.

ವಿಶೇಷ ಎಂದರೆ ವೆಸ್ಟ್ ಇಂಡೀಸ್​ ತಂಡವು ಟೀಮ್ ಇಂಡಿಯಾ ವಿರುದ್ಧ ಹೀಗೆ ಸತತ ಎರಡು ಗೆಲುವುಗಳನ್ನು ಕಾಣುತ್ತಿರುವುದು 7 ವರ್ಷಗಳ ಬಳಿಕ. ಅಂದರೆ 2016 ರಲ್ಲಿ ಕೊನೆಯ ಬಾರಿ ವಿಂಡೀಸ್ ತಂಡವು ಟೀಮ್ ಇಂಡಿಯಾ ಸತತವಾಗಿ ಎರಡು ಪಂದ್ಯಗಳಲ್ಲಿ ಸೋಲಿಸಿತ್ತು.

ಇದಾದ ಬಳಿಕ ಟೀಮ್ ಇಂಡಿಯಾ ವಿರುದ್ಧ ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡಿಲ್ಲ. ಹಾಗೆಯೇ ಸರಣಿಯನ್ನೂ ಸಹ ಜಯಿಸಿಲ್ಲ. ಇದೀಗ ಮೊದಲೆರಡು ಟಿ20 ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸಿರುವ ವೆಸ್ಟ್ ಇಂಡೀಸ್ ಸರಣಿ ಗೆಲುವಿನತ್ತ ಮುನ್ನುಗ್ಗುತ್ತಿದೆ.

ಒಂದು ವೇಳೆ ಗಯಾನಾದಲ್ಲಿ ನಡೆಯಲಿರುವ 3ನೇ ಟಿ20 ಪಂದ್ಯದಲ್ಲೂ ಜಯ ಸಾಧಿಸಿದರೆ ಸರಣಿ ವೆಸ್ಟ್ ಇಂಡೀಸ್ ಪಾಲಾಗಲಿದೆ. ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಮೂರನೇ ಮ್ಯಾಚ್ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿದೆ.

ಸರಣಿ ಗೆಲ್ಲುವ ಅವಕಾಶ:

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇದುವರೆಗೆ ಒಟ್ಟು 8 ಟಿ20 ದ್ವಿಪಕ್ಷೀಯ ಸರಣಿಗಳು ನಡೆದಿವೆ. ಇದರಲ್ಲಿ ಭಾರತ 6 ಬಾರಿ ಗೆದ್ದಿದ್ದರೆ, ವೆಸ್ಟ್ ಇಂಡೀಸ್ 2 ಸಲ ಟ್ರೋಫಿ ಎತ್ತಿ ಹಿಡಿದಿದೆ. ಇದೀಗ ಮೂರನೇ ಬಾರಿ ಸರಣಿ ಗೆಲ್ಲಲು ವೆಸ್ಟ್ ಇಂಡೀಸ್ ಮೂರನೇ ಟಿ20 ಪಂದ್ಯವನ್ನು ಗೆಲ್ಲಬೇಕಿದೆ.

ಭಾರತ ಟಿ20 ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.ವೆಸ್ಟ್ ಇಂಡೀಸ್ ಟಿ20 ತಂಡ: ರೋವ್‌ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೊಸೈನ್, ಅಲ್ಝಾರಿ ಜೋಸೆಫ್, ಬ್ರಾಂಡನ್ ಕಿಂಗ್, ಓಬೆಡ್ ಮೆಕಾಯ್, ನಿಕೋಲಸ್ ಪೂರನ್, ರೊಮಾರಿಯೊ ಶೆಫರ್ಡ್, ಓಡಿಯನ್ ಸ್ಮಿತ್ , ಓಶಾನೆ ಥಾಮಸ್.