ಪೌರಾಡಳಿತ ಮಂತ್ರಿಯನ್ನು ತಕ್ಷಣ ಚಿತ್ರದುರ್ಗಕ್ಕೆ ಕಳುಹಿಸಿ: ಕೋಟ ಶ್ರೀನಿವಾಸ್ ಪೂಜಾರಿ

ಮಂಗಳೂರು, 100ಕ್ಕೂ ಹೆಚ್ಚು ಜನ‌ರು ಆಸ್ಪತ್ರೆಗೆ ಸೇರಿದ್ದಾರೆ. ದುರಾದೃಷ್ಟ ಪೌರಾಡಳಿತ ಸಚಿವ ರಹೀಂಖಾನ್ ಭೇಟಿಯೇ ಕೊಟ್ಟಿಲ್ಲ ಎಂದು ಬಿಜೆಪಿ ಎಂಎಲ್​ಸಿ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ಹೊರಹಾಕಿದ್ದಾರೆ. ಚಿತ್ರದುರ್ಗದಲ್ಲಿ  ಕಲುಷಿತ ನೀರು ಸೇವಿಸಿ ಐವರು ಸಾವು ಪ್ರಕರಣ ಸಂಬಂಧ ಮಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವರನ್ನು ಕೂಡಲೇ ಚಿತ್ರದುರ್ಗಕ್ಕೆ ಕಳುಹಿಸಿ ಎಂದರು.ಆರೋಗ್ಯ ಮಂತ್ರಿ ಆಸ್ಪತ್ರೆಗೆ ಬಂದು ಪರಿಹಾರ ಕೊಟ್ಟು ಹೋಗುತ್ತಾರೆ. ಪೌರಾಡಳಿತ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಹ ಹೋಗಿಲ್ಲ. ಹೇಳುವವರು ಕೇಳುವವರು ಯಾರು ಇಲ್ಲ ಎಂಬ ಪರಿಸ್ಥಿತಿ ನಡೆಯುತ್ತಿದೆ. ಘಟನೆ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆ ಮಾಡಬೇಕು. ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಘಟನೆಗೆ ಮೂಲ ಕಾರಣ ಏನು ಎಂಬುವುದರ ಬಗ್ಗೆ ತನಿಖೆ ಆಗಬೇಕು. ಮಾತೆತ್ತಿದರೆ ಅಧಿಕಾರಕ್ಕೆ ಬಂದು 2-3 ತಿಂಗಳಾಯಿತು ಎಂದು ಹೇಳುತ್ತಾರೆ, ಜನರ ಸಾವಿನ ಸ್ಥಿತಿ ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.

ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ಜನರ ಆರೋಗ್ಯ ವಿಚಾರಸಿದಿ ಮಾಜಿ ಸಚಿವ ಸಿಟಿ ರವಿ, ರಾಜ್ಯದ ಹಲವೆಡೆ ಈರೀತಿಯ ಪ್ರಕರಣ ನಡೆದಿವೆ. ರಾಜ್ಯ ಸರ್ಕಾರ ಈವರೆಗೆ ಎಚ್ಚೆತ್ತುಕೊಂಡಿಲ್ಲ. ಸಾವಿನ ಬಳಿಕ ಪರಿಹಾರ ಕೊಡುವುದು ಒಂದು ಭಾಗ. ಈರೀತಿಯ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು.

ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಕೊಡಬೇಕು. ಮೃತರ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಆಗ್ರಹಿಸಿದ ಸಿ.ಟಿ.ರವಿ, ಸಾವು ಸಂಭವಿಸುವವರೆಗೆ ಗಂಭೀರವಾಗಿ ಪರಿಗಣಿಸದಿರುವ ಮಾನಸಿಕತೆ ಒಳ್ಳೆಯದಲ್ಲ. ಜಿಲ್ಲಾಡಳಿತ ಮತ್ತು ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ದರಿದ್ರ ಬಂದಿಲ್ಲ ಎಂದು ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಮಾತನಾಡಿದ ಸಿ.ಟಿ. ರವಿ, ಆ ದರಿದ್ರ ಅವರಿಗೆ ಬರುವುದು ಬೇಡ, ಅದು ಒಳ್ಳೆಯದೂ ಅಲ್ಲ ಎಂದರು. ಆಸ್ಪತ್ರೆಗೆ ಸಿಟಿ ರವಿ ಜೊತೆ ಮಾಜಿ ಸಚಿವ ಬಿ.ಸಿ.ನಾಗೇಶ್, ಚಿತ್ರದುರ್ಗ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಎಂಎಲ್​ಸಿ ಕೆ.ಎಸ್.ನವೀನ್ ಇದ್ದರು.