ಪ್ರಯಾಣಿಕರನ್ನು ಬೆಂಗಳೂರು ನಿಲ್ದಾಣದಲ್ಲೇ ಬಿಟ್ಟು ಮಂಗಳೂರಿಗೆ ಹಾರಿದ ಇಂಡಿಗೋ ವಿಮಾನ.

ಮಂಗಳೂರು, ಬೆಂಗಳೂರಿನಿಂದ ಮಂಗಳೂರಿಗೆ ಹಾರುವ ಇಂಡಿಗೋ 6E 6162 ವಿಮಾನದ ಟಿಕೆಟ್ ಬುಕ್ ಮಾಡಿದ್ದ ಆರು ಮಂದಿ ಪ್ರಯಾಣಿಕರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದರೂವಿಮಾನ ನಿಗದಿತ ನಿರ್ಗಮನ ಸಮಯಕ್ಕಿಂತ 12 ನಿಮಿಷ ಬೇಗ ಟೇಕಾಫ್ ಆಗಿದೆ. ಇದರಿಂದ ಪ್ರಯಾಣಿಕರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪರದಾಡುವಂತಾದ ಘಟನೆ ನಡೆದಿದೆ.ಸರ್ಕಾರಿ ಅಧಿಕಾರಿಯಾಗಿರುವ ಪ್ರಯಾಣಿಕರೊಬ್ಬರ ಪ್ರಕಾರ, ಇಂಡಿಗೋ ವಿಮಾನವು ಮಧ್ಯಾಹ್ನ 2.55 ಕ್ಕೆ ಹೊರಡಬೇಕಿತ್ತು, ಆದರೆ 2.43 ಕ್ಕೆ ಟೇಕ್ ಆಫ್ ಆಗಿದೆ. 6 ಮಂದಿ ಪ್ರಯಾಣಿಕರನ್ನು ಬಿಟ್ಟು ವಿಮಾನ ಹೊರಟಿದೆ. ಈ ಹಿನ್ನೆಲೆ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದು ಇಂಡಿಗೋ ಬೇರೆ ವ್ಯವಸ್ಥೆ ಕಲ್ಪಿಸಿದೆ. (6E-578) ರಾತ್ರಿ 8.20 ಕ್ಕೆ ಹೊರಡುವ ವಿಮಾನದಲ್ಲಿ ತೆರಳಲು ಪ್ರಯಾಣಿಕರಿಗೆ ಅವಕಾಶ ನೀಡಿತು. ಇದರಿಂದ ಪ್ರಯಾಣಿಕರು ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದರು.

ಇನ್ನು ವಿಮಾನ ಹಾರಾಟದಲ್ಲಿ ಬದಲಾವಣೆ ಅಥವಾ ವೇಳಾಪಟ್ಟಿ ಬದಲಾದರೆ ಪ್ರಯಾಣಿಕರಿಗೆ ತಿಳಿಸುವುದು ವಾಡಿಕೆ ಮತ್ತು ವಿಮಾನ ನಿರ್ವಾಹಕರ ಜವಾಬ್ದಾರಿಯಾಗಿದೆ. ಆದರೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ನಾವು ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣವನ್ನು ತಲುಪಿದ್ದೇವೆ. ನಾವು ವಿಮಾನ ನಿಲ್ದಾಣದಲ್ಲಿ ಆರು ಗಂಟೆಗಳ ಕಾಲ ಕಾಯಬೇಕಾಯಿತು. ಮುಂದಿನ ವಿಮಾನದಲ್ಲಿ ಮಂಗಳೂರಿಗೆ ಹೋಗಿ ಎಂದರು. ಸದ್ಯ ನಾವೀಗ ಮಂಗಳೂರಿನಲ್ಲಿದ್ದೇವೆ ಎಂದು ಮಂಗಳೂರು ತಲುಪಿದ ಪ್ರಯಾಣಿಕರೊಬ್ಬರು ತಿಳಿಸಿದರು.

ಮತ್ತೊಂದೆಡೆ ಪ್ರಯಾಣಿಕರ ಪ್ರತಿಭಟನೆ ಬಗ್ಗೆ ಸ್ಪಷ್ಟನೆ ನೀಡಿದ ಇಂಡಿಗೋ, ಪ್ರಯಾಣಿಕರ ಆರೋಪವನ್ನು ತಳ್ಳಿ ಹಾಕಿದೆ. ನಿಗದಿತ ಸಮಯಕ್ಕೆ ವಿಮಾನ ಹೊರಟಿದೆ. ವಿಮಾನವು ಮಧ್ಯಾಹ್ನ 2.43 ಕ್ಕೆ ಗೇಟ್‌ನಿಂದ ಹೊರಗಿತ್ತು ಮತ್ತು 2.57 ಕ್ಕೆ ವಿಮಾನ ನಿಲ್ದಾಣದಿಂದ ನಿರ್ಗಮಿಸಿತು ಎಂದು ತಿಳಿಸಿದೆ.