ಬೆಂಗಳೂರು, ಭಾರತದ ಖಾಸಗಿ ವಲಯದ ಸಹಭಾಗಿತ್ವವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಬೆಳವಣಿಗೆಗಳಾಗುತ್ತಿವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ತನ್ನಲ್ಲಿರುವ ಪ್ರಮುಖ ಸೆಟಿಲೈಟ್ ತಂತ್ರಜ್ಞಾನವೊಂದನ್ನು ಖಾಸಗಿ ಸಂಸ್ಥೆಗೆ ರವಾನಿಸುತ್ತಿದೆ. ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಸಂಸ್ಥೆಗೆ ಐಎಂಎಸ್-1 ಸೆಟಿಲೈಟ್ ಬಸ್ ಟೆಕ್ನಾಲಜಿಯನ್ನು ರವಾನಿಸುವ ಕೆಲಸ ಆರಂಭಿಸಿರುವುದಾಗಿ ಇಸ್ರೋ ಆಗಸ್ಟ್ 4ರಂದು ಪ್ರಕಟಿಸಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿ ಮತ್ತು ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಮಧ್ಯೆ ಆಗಸ್ಟ್ 2ರಂದು ಒಪ್ಪಂದ ಆಗಿತ್ತೆನ್ನಲಾಗಿದೆ.
ಏನಿದು ಸೆಟಿಲೈಟ್ ಬಸ್ ಟೆಕ್ನಾಲಜಿ?
ಸೆಟಿಲೈಟ್ ಬಸ್ ಎಂಬುದು ಯಾವುದೇ ಸೆಟಿಲೈಟ್ ಅಥವಾ ಗಗನನೌಕೆಯ ಮುಖ್ಯ ಭಾಗ. ಪೇಲೋಡ್ ಹಾಗೂ ಇತರ ಎಲ್ಲಾ ವೈಜ್ಞಾನಿಕ ಉಪಕರಣಗಳನ್ನು ಈ ಬಸ್ ಒಳಗೊಂಡಿರುತ್ತದೆ. ಭೂಮಿಯ ಕೆಳ ಕಕ್ಷೆಯಲ್ಲಿ ಇರುವ ಸಂವಹನ ಉಪಗ್ರಹಗಳಿಗೆ ಹೆಚ್ಚಾಗಿ ಇದರ ಬಳಕೆ ಆಗುತ್ತದೆ. ಸೆಟಿಲೈಟ್ ಬಸ್ ತಂತ್ರಜ್ಞಾನದ ಪರಿಣತಿ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಇಸ್ರೋ ಐಎಂಎಸ್ ಮತ್ರವಲ್ಲ ಐಕೆ ಸರಣಿಯ ಸೆಟಿಲೈಟ್ ಬಸ್ಗಳನ್ನು ತಯಾರಿಸುತ್ತದೆ.
ಇಂಡಿಯನ್ ಮಿನಿ ಸೆಟಿಲೈಟ್ಬ ಸ್ ಟೆಕ್ನಾಲಜಿಯನ್ನು ಯುಆರ್ ರಾವ್ ಸೆಟಿಲೈಟ್ ಸೆಂಟರ್ ಅಭಿವೃದ್ಧಿಪಡಿಸಿದೆ. ಬಾಹ್ಯಾಕಾಶಕ್ಕೆ ಕಡಿಮೆ ವೆಚ್ಚದಲ್ಲಿ ಸೆಟಿಲೈಟ್ ರವಾನಿಸಲು ಇದು ಬಹಳ ಉಪಯುಕ್ತವಾಗಿದೆ. ಈ ಬಸ್ ಅನ್ನು ಐಎಂಎಸ್-1, ಯೂತ್ಸ್ಯಾಟ್, ಮೈಕ್ರೋಸ್ಯಾಟ್-2ಡಿ ಇತ್ಯಾದಿ ಇಸ್ರೋದ ಹಿಂದಿನ ಯೋಜನೆಗಳಲ್ಲಿ ಬಳಕೆ ಮಾಡಲಾಗಿದೆ.
ಐಎಂಎಸ್-1 ಬಸ್ನ ತೂಕ 100 ಕಿಲೋ ಇದ್ದು, ಇದು 30 ಕಿಲೋವರೆಗಿನ ತೂಕ ಪೇಲೋಡ್ ಅನ್ನು ಹೊರಬಲ್ಲುದು. ಸೌರಶಕ್ತಿಯಿಂದ ಇದು 330 ವ್ಯಾಟ್ ವಿದ್ಯುತ್ ತಯಾರಿಸಬಲ್ಲುದು.
ಸೆಟಿಲೈಟ್ ಬಸ್ ತಂತ್ರಜ್ಞಾನವನ್ನು ಖಾಸಗಿ ವಲಯದೊಂದಿಗೆ ಹಂಚಿಕೊಳ್ಳುವ ಮೂಲಕ ಇಸ್ರೋ ಭಾರತದಲ್ಲಿ ಬಾಹ್ಯಾಕಾಶ ಉದ್ಯಮ ಶಕ್ತಿಯುತವಾಗಿ ಬೆಳೆಯುವಂತೆ ದಾರಿ ಮಾಡಿದೆ. ಈಗಾಗಲೇ ಬಹಳಷ್ಟು ಖಾಸಗಿ ಕಂಪನಿಗಳು ಬಾಹ್ಯಾಕಾಶ ಉದ್ಯಮದಲ್ಲಿವೆ. ಕೆಲ ಕಂಪನಿಗಳು ರಾಕೆಟ್ ಕೂಡ ತಯಾರಿಸುತ್ತಿವೆ. ಅಮೆರಿಕದಲ್ಲೂ ಇಂಥ ಪ್ರಯೋಗ ಹಲವು ದಶಕಗಳ ಹಿಂದೆಯೇ ಆಗಿದೆ. ಅದರ ಫಲವಾಗಿ ಸ್ಪೇಸ್ ಎಕ್ಸ್ ಸೇರಿದಂತೆ ಅಮೆರಿಕದ ಹಲವು ಖಾಸಗಿ ಸಂಸ್ಥೆಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ. ಇದರಿಂದ ನಾಸಾ ಸಂಸ್ಥೆಯ ಮೇಲಿನ ಹೊರೆ ಬಹಳಷ್ಟು ಕಡಿಮೆ ಆಗಿ, ಗಂಭೀರ ಸ್ವರೂಪದ ಯೋಜನೆ ಮತ್ತು ಸಂಶೋಧನೆಗಳಿಗೆ ಸಹಕಾರ ಸಿಕ್ಕಂತಾಗಿದೆ.
ಇಸ್ರೋ ಕೂಡ ಇದೇ ಹಾದಿಯಲ್ಲಿದೆ. ಭಾರತದ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭಾರತದ ಬಾಹ್ಯಾಕಾಶ ಉದ್ಯಮ ಮುಂದಿನ ದಿನಗಳಲ್ಲಿ ಉಜ್ವಲವಾಗಿ ಬೆಳಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.