ದಾಂಡೇಲಿ : ನಗರದ ಮಾರುತಿ ನಗರದ ನಿವಾಸಿ ಹಾಗೂ ಜನತಾ ವಿದ್ಯಾಲಯ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ನಡೆದಿದೆ.
ಮಾರುತಿನಗರದ ಸ್ಯಾಮುವೆಲ್ ಡೊಕ್ಕ ಎಂಬವರ ಸುಪುತ್ರಿ 15 ವರ್ಷ ವಯಸ್ಸಿನ ಅನ್ನಮ್ಮ ಸ್ಯಾಮುವೆಲ್ ಡೊಕ್ಕ ಎಂಬವಳೆ ಆತ್ಮಹತ್ಯೆಗೆ ಶರಣಾದ ಬಾಲಕಿಯಾಗಿದ್ದಾಳೆ. ಈಕೆ ಮಾರುತಿನಗರದಲ್ಲಿರುವ ತನ್ನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ದಾಂಡೇಲಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆ ತರಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಶವಗಾರದಲ್ಲಿ ಇರಿಸಲಾಗಿದೆ.
ನಗರದ ಜನತಾ ವಿದ್ಯಾಲಯ ಪ್ರೌಢಶಾಲೆಯ ಕನ್ನಡ ಮಾಧ್ಯಮದ 10ನೇ ತರಗತಿಯಲ್ಲಿ ಓದುತ್ತಿದ್ದ ಅನ್ನಮ್ಮ ಸ್ಯಾಮುವೆಲ್ ಡೊಕ್ಕ ಈಕೆ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಅತ್ಯುತ್ತಮ ಕ್ರೀಡಾಪಟುವಾಗಿ, ಕರಾಟೆ ಪಟುವಾಗಿ ಗಮನ ಸೆಳೆದಿದ್ದಳು. ಕಲಿಕೆಯಲ್ಲಿಯೂ ಮುಂದಿದ್ದ ಈಕೆ ಸದಾ ಕ್ರೀಯಾಶೀಲ ವಿದ್ಯಾರ್ಥಿನಿಯಾಗಿದ್ದಳು. ಈ ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದೆ. ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಭವಿಷ್ಯದಲ್ಲಿ ಬೆಳಗಬೇಕಿದ್ದ ಬಾಲಕಿ ಸಾಧನೆಯ ಶಿಖರವೇರುವ ಮುನ್ನವೆ ಇಹಲೋಕ ತ್ಯಜಿಸಿರುವುದು ದುರ್ದೈವ್ಯ.
ವಿದ್ಯಾರ್ಥಿನಿ ಸಾವು : ಜನತಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಮೌನ ಪ್ರಾರ್ಥನೆ
ದಾಂಡೇಲಿ ನಗರದ ಜನತಾ ವಿದ್ಯಾಲಯ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಅನ್ನಮ್ಮ ಸ್ಯಾಮುವೆಲ್ ಡೊಕ್ಕ ಈಕೆಯ ಸಾವಿನ ಹಿನ್ನಲೆಯಲ್ಲಿ ಇಂದು ಶುಕ್ರವಾರ ಜನತಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಮೃತ ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯ್ತು. ಆನಂತರ ಮೃತಳ ಗೌರವಾರ್ಥ ಶಾಲೆಗೆ ಒಂದು ದಿನದ ರಜೆಯನ್ನು ಘೋಷಿಸಲಾಯ್ತು.