ವಿದ್ಯುತ್ ಸಂಪರ್ಕ ವ್ಯವಸ್ಥೆ ದುರಸ್ತಿ ಪಡಿಸುವಂತೆ ಮನವಿ ಮಾಡಿದ ಗುಳೆ ಕುಗ್ರಾಮದ ಗ್ರಾಮಸ್ಥರು.

ಅಂಕೋಲಾ: ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮಗಳಲ್ಲಿ ಗುಳೆ ಒಂದಾಗಿದೆ. ಹಲವು ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಇಲ್ಲಿನ ಗ್ರಾಮಸ್ಥರು ಪ್ರಕೃತಿಯ ಒಡನಾಟದೊಂದಿಗೆ ಸಹಜ ಜೀವನ ನಡೆಸುತ್ತಿದ್ದಾರೆ. ಆದರೆ ಕಳೆದ ಎರಡು ತಿಂಗಳಿನಿಂದ ಈ ಗ್ರಾಮದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅದನ್ನು ಸರಿಪಡಿಸುವಂತೆ ಗ್ರಾಮಸ್ಥರು ಸೋಮವಾರ ತಹಶೀಲ್ದಾರರು ಮತ್ತು ಹೆಸ್ಕಾಂನ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕಳೆದ ಎರಡು ತಿಂಗಳಿನಿಂದ ವಿದ್ಯುತ್ ಸಂಪರ್ಕ ಇರುವುದಿಲ್ಲ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೆ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಕುಗ್ರಾಮದಲ್ಲಿ ವಿದ್ಯುತ್ ಸರಬರಾಜು ಇಲ್ಲದೆ ಅಂಗನವಾಡಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತೊಂದರೆ ಅನುಭವಿಸುವಂತೆ ಆಗಿದೆ. ಸಂಬಂಧಿಸಿದ ಅಧಿಕಾರಿಗಳ ಮೂಲಕ ಆದಷ್ಟೂ ಶೀಘ್ರದಲ್ಲಿಯೇ ಸಮಸ್ಯೆ ಪರಿಹರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಎರಡು ಇಲಾಖೆಗೂ ಪ್ರತ್ಯೇಕವಾಗಿ ಮನವಿ ನೀಡಲಾಯಿತು. ತಹಶೀಲ್ದಾರ್ ಪರವಾಗಿ ಉಪತಹಶಿಲ್ದಾರ್ ಸುರೇಶ ಹರಿಕಂತ್ರ ಹಾಗೂ ಹೆಸ್ಕಾಂ ಕಾಮಗಾರಿ ಘಟಕ ಮೇಲ್ವಿಚಾರಕ ಸತೀಶ್ ನಾಯ್ಕ್ ಮನವಿ ಸ್ವೀಕರಿಸಿದರು. ವಕೀಲ ಉಮೇಶ್ ನಾಯ್ಕ, ಗುಳೆ ಗ್ರಾಮದ ರಾಘವೇಂದ್ರ ನಾಯ್ಕ, ಹಾಡು ಗೌಡ, ಪಾಂಡುರಂಗ ಗೌಡ, ಸುರೇಶ ಗೌಡ, ದಿಗಂಬರ ಗೌಡ, ರಾಜು ಗೌಡ, ಆನಂದು ಗೌಡ, ಸಂತು ಗೌಡ ಮತ್ತು ಇತರೆ ಗ್ರಾಮಸ್ಥರು ಇದ್ದರು.