ಸಿಐಟಿಯು ಹಿರಿಯ ಮುಖಂಡ ಆರ್.ಎಂ. ಮುಲ್ಲಾ ನಿಧನ

ಹಳಿಯಾಳ : ಜಿಲ್ಲೆಯ ಸಿಐಟಿಯು ಹಿರಿಯ ಮುಖಂಡರಾದ ತಾಲ್ಲೂಕಿನ ಹವಗಿ ಗ್ರಾಮದ ನಿವಾಸಿ ಆರ್.ಎಂ.ಮುಲ್ಲಾ ಅವರು ಇಂದು ವಿಧಿವಶರಾದರು. ಮೃತರಿಗೆ 77 ವರ್ಷ ವಯಸ್ಸಾಗಿತ್ತು.

ರಾಜೇಸಾಬ ಮುಲ್ಲಾ ಅವರು ಹವಗಿ ಗ್ರಾಮ ಪಂಚಾಯತ್ ಗುಮಾಸ್ತರಾಗಿ ಸೇವೆ ಸಲ್ಲಿಸಿದ್ದರು. ಸಿಐಟಿಯು ಸಂಘಟನೆಯ ಹಿರಿಯ ಮುಖಂಡರಾಗಿ ಅನೇಕ ಜನಪರ ಹೋರಾಟಗಳನ್ನು ಸಂಘಟಿಸಿದ್ದರು. ಸಿಐಟಿಯು ಸಂಯೋಜಿತ ಗ್ರಾಮ ಪಂಚಾಯತ್ ನೌಕರರ ಸಂಘದ ಉತ್ತರ ಕನ್ನಡ ಜಿಲ್ಲಾ ಸಂಸ್ಥಾಪಕ‌ ಅಧ್ಯಕ್ಷರಾಗಿ ಅನುಪಮ ಸೇವೆಯನ್ನು ಸಲ್ಲಿಸಿದ್ದರು. 

ಅಂಗನವಾಡಿ, ಬಿಸಿಯೂಟ ನೌಕರರ ಸಂಘಟನೆ, ಪ್ರಾಂತ ರೈತ ಸಂಘ ಹೀಗೆ ಮೊದಲಾದ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಮುಲ್ಲಾ ಅವರು  ದುಡಿಯುವ ವರ್ಗದವರ  ಅಭ್ಯುದಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಕಮ್ಯುನಿಸ್ಟ್ ಸಂಘಟನೆಯಲ್ಲಿದ್ದರೂ ಸಹ ಹವಗಿ ಗ್ರಾಮದ ಮಾರುತಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿಯಾಗಿ ಶೃದ್ಧಾ ಭಕ್ತಿಯಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದರು. 

ಮೊನ್ನೆ ಮೊನ್ನೆಯವರೆಗೂ ರಾಜ್ಯದ ವಿವಿಧೆಡೆಗಳಲ್ಲಿ ಸಂಘಟನೆ ವತಿಯಿಂದ ಆಯೋಜಿಲಾಗುತ್ತಿದ್ದ ಕಾರ್ಯಾಗಾರಗಳು, ಹೋರಾಟಗಳಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುತ್ತಿದ್ದರು.   

ಮೃತರು ಪತ್ನಿ,  ಇಬ್ಬರು ಪುತ್ರರು, ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧುಬಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ತಾಲ್ಲೂಕು ಹಾಗೂ ಜಿಲ್ಲೆಯ ಗಣ್ಯರನೇಕರು ಕಂಬನಿ ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.