ಕೆರಿಬಿಯನ್ ನಾಡಲ್ಲಿ ಇಶಾನ್ ಕಿಶನ್ ಅದ್ಭುತ ಫಾರ್ಮ್ ಮುಂದುವರೆದಿದೆ. ಟೆಸ್ಟ್ ಸರಣಿ ಬಳಿಕ ಏಕದಿನ ಸರಣಿಯಲ್ಲೂ ಕಿಶನ್ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಮೊದಲ ಏಕದಿನದಲ್ಲಿ 52 ರನ್ ಕಲೆಹಾಕಿದ್ದ ವಿಕೆಟ್ ಕೀಪರ್, ಬ್ಯಾಟರ್ ಎರಡನೇ ಪಂದ್ಯದಲ್ಲೂ ಆಕರ್ಷಕ ಅರ್ಧಶತಕ ಸಿಡಿಸಿ 55 ರನ್ ಚಚ್ಚಿದರು.
ದ್ವಿತೀಯ ಏಕದಿನದಲ್ಲಿ ಭಾರತ 181 ರನ್ಗಳಿಗೆ ಆಲೌಟ್ ಆಗುವ ಹೀನಾಯ ಪ್ರದರ್ಶನ ತೋರಿತು. ಇದರಲ್ಲಿ ಗರಿಷ್ಠ ರನ್ ಗಳಿಸಿದ್ದು ಇಶಾನ್ ಕಿಶನ್. ಶುಭ್ಮನ್ ಗಿಲ್ ಜೊತೆಗೂಡಿ 90 ರನ್ಗಳ ಕಾಣಿಕೆ ನೀಡಿದರು. ಕಿಶನ್ ಬ್ಯಾಟ್ನಿಂದ ಆರು ಫೋರ್ ಮತ್ತು 1 ಸಿಕ್ಸರ್ ಬಂದವು.
ಭರ್ಜರಿ ಅರ್ಧಶತಕದ ಮೂಲಕ ಕಿಶನ್ ನೂತನ ದಾಖಲೆ ನಿರ್ಮಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್, ಬ್ಯಾಟರ್ ಎಂಎಸ್ ಧೋನಿ ದಾಖಲೆಯನ್ನು ಕಿಶನ್ ಸರಿಗಟ್ಟಿದ್ದಾರೆ.
ಕಿಶನ್ ಕೆರಿಬಿಯನ್ ನಾಡಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಬ್ಯಾಕ್ ಟು ಬ್ಯಾಕ್ ಏಕದಿನ ಅರ್ಧ ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ವಿಕೆಟ್ ಕೀಪರ್ ಎನಿಸಿಕೊಂಡರು. 2017 ರಲ್ಲಿ ಭಾರತದ ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಧೋನಿ ಈ ಸಾಧನೆ ಮಾಡಿದ್ದರು.
ಅಂದು ಧೋನಿ ನಾರ್ತ್ ಸೌಂಡ್‌ನಲ್ಲಿ ನಡೆದ ಮೂರನೇ ಏಕದಿನದಲ್ಲಿ 79 ಎಸೆತಗಳಲ್ಲಿ 78 ರನ್ ಮತ್ತು ನಾಲ್ಕನೇ ODI ನಲ್ಲಿ 114 ಎಸೆತಗಳಲ್ಲಿ 54 ರನ್ ಗಳಿಸಿದ್ದರು. ಇದೀಗ ಕಿಶನ್ ಇವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇದರ ಜೊತೆಗೆ ಇಶಾನ್ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ದಾಖಲೆಯನ್ನೂ ಮುರಿದಿದ್ದಾರೆ. ಕಿಶನ್ ಐದು ಇನ್ನಿಂಗ್ಸ್‌ಗಳ ನಂತರ ಭಾರತ ಪರ ಓಪನರ್ ಆಗಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತಲುಪಿದ್ದಾರೆ. ತೆಂಡೂಲ್ಕರ್ ಅವರು ಆರಂಭಿಕನಾಗಿ ಮೊದಲ ಐದು ಇನ್ನಿಂಗ್ಸ್ನಲ್ಲಿ ಗಳಿಸಿದ್ದು 321 ರನ್. ಕಿಶನ್ ಇದೀಗ 348 ರನ್ ಗಳಿಸಿದ್ದಾರೆ.
ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಹೀನಾಯ ಪ್ರದರ್ಶನ ತೋರಿ ಸೋಲು ಕಂಡಿದೆ. ಭಾರತ ನೀಡಿದ 182 ರನ್ಗಳ ಟಾರ್ಗೆಟ್ ಅನ್ನು ವೆಸ್ಟ್ ಇಂಡೀಸ್ 36.4 ಓವರ್ಗಳಲ್ಲಿ ಮುಟ್ಟಿ 6 ವಿಕೆಟ್ಗಳ ಜಯ ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಅಂಕಗಳ ಅಂತರದ ಮುನ್ನಡೆ ಪಡೆದುಕೊಂಡಿದೆ.