ಮೈಸೂರು: ಖಾಸಗಿ ಕಾರ್ಖಾನೆಯ ಉದ್ಯೋಗಿಯೊಬ್ಬರಿಂದ ಸಿನಿಮೀಯ ಶೈಲಿಯಲ್ಲಿ ಸುಮಾರು 6 ಲಕ್ಷ ರೂ. ದೋಚಿದ ಘಟನೆ Mysuru ಹೆಬ್ಬಾಳ ಕೈಗಾರಿಕಾ ಪ್ರದೇಶದ ಬ್ಯಾಂಕ್ ಶಾಖೆ ಬಳಿ ನಡೆದಿದೆ. ಉದ್ಯೋಗಿ ತುಳಸೀದಾನ್ ಎಂಬವರ ಕೈಯಲ್ಲಿದ್ದ 6,05,797 ಲಕ್ಷ ರೂ. ಬ್ಯಾಗನ್ನು ಕಳ್ಳರು ಎಗರಿಸಿದ್ದು, ಅದೃಷ್ಟವಶಾತ್, 38.4 ಲಕ್ಷ ರೂ. ಇದ್ದ ಇನ್ನೊಂದು ಬ್ಯಾಗ್ ಅವರ ಬಳಿಯೇ ಉಳಿದುಕೊಂಡಿದೆ. ಹೆಬ್ಬಾಳ ಕೈಗಾರಿಕಾ ಪ್ರದೇಶದ ದರಸಗುಪ್ಪೆ ಎಸ್‌ಎಸ್‌ಸಿ ಪ್ರೈವೇಟ್ ಲಿಮಿಟೆಡ್‌ನ (ಚಿಲ್ಲರೆ ವ್ಯಾಪಾರಿಗಳಿಗೆ ಸರಬರಾಜು ಮಾಡುವ ದಿನಸಿ ಮತ್ತು ಐಟಿಸಿ ಸಿಗರೇಟ್‌ಗಳ ಪ್ಯಾಕೇಜಿಂಗ್ ಕಾರ್ಖಾನೆ) ಉದ್ಯೋಗಿ ತುಳಸಿದಾಸ್, ಸಂಗ್ರಹದ ಮೊತ್ತವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಜಮೆ ಮಾಡಲು ಬಂದಾಗ ಬುಧವಾರ ಬೆಳಿಗ್ಗೆ 10.15 ರ ಸುಮಾರಿಗೆ ಕಳ್ಳತನ ನಡೆದಿದೆ.
ಹೆಬ್ಬಾಳದಲ್ಲಿ ನಡೆದಿದ್ದೇನು?
ಮತ್ತೊಬ್ಬರು ಚಲಾಯಿಸುತ್ತಿದ್ದ ಸರಕು ಸಾಗಣೆ ವಾಹನದ ಕ್ಯಾಬಿನ್‌ನಿಂದ ತುಳಸೀದಾಸ್ ಕೆಳಗಿಳಿದಿದ್ದಾರೆ. ಅಷ್ಟರಲ್ಲಿ, ಬ್ಯಾಂಕ್ ಕಟ್ಟಡದ ಕಾಂಪೌಂಡ್ ಪಕ್ಕದಲ್ಲಿ ನಿಂತಿದ್ದ ಅಪರಿಚಿತ ವ್ಯಕ್ತಿಯೊಬ್ಬ ನಿಧಾನವಾಗಿ ಅವರತ್ತ ನಡೆದುಕೊಂಡು ಬಂದು ಮೆಣಸಿನ ಪುಡಿಯನ್ನು ಅವರ ಮುಖಕ್ಕೆ ಎರಚಿ ರೂ.ಗಳಿದ್ದ ಬ್ಯಾಗನ್ನು ಕಿತ್ತುಕೊಂಡ. ತುಳಸೀದಾಸ್ ಬಲಗೈಯಲ್ಲಿದ್ದ 6,05,797 ರೂ. ಬ್ಯಾಗನ್ನು ಹಿಂದಿನಿಂದ ಎಳೆದುಕೊಂಡ. ನಂತರ ಮತ್ತೊಬ್ಬ ವ್ಯಕ್ತಿ ಜತೆ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ತುಳಸೀದಾಸ್ ಎಡಗೈಯಲ್ಲಿ 38.4 ಲಕ್ಷ ರೂ. ಇದ್ದ ಇನ್ನೊಂದು ಚೀಲವಿತ್ತು. ಅದು ಅವರ ಕೈಯಲ್ಲೇ ಉಳಿದಿದೆ.
ಪರಾರಿಯಾಗುತ್ತಿದ್ದ ಖದೀಮರನ್ನು ಹಿಡಿಯಲು ತುಳಸಿದಾಸ್ ಅವರ ಚಾಲಕ ಪ್ರಯತ್ನ ಮಾಡಿದರೂ ವ್ಯರ್ಥವಾಯಿತು. ತುಳಸೀದಾಸ್ ಕಿರುಚಾಟಕ್ಕೆ ಸ್ಪಂದಿಸಿ ಬ್ಯಾಂಕ್‌ನ ಕಾಂಪೌಂಡ್‌ನೊಳಗೆ ನಿಲ್ಲಿಸಿದ್ದ ಕಾರಿನಲ್ಲಿ ಕುಳಿತಿದ್ದ ಮತ್ತೊಬ್ಬ ವ್ಯಕ್ತಿಯೂ ಕಳ್ಳರನ್ನು ಬೆನ್ನಟ್ಟಿದರೂ ಪ್ರಯೋಜನವಾಗಲಿಲ್ಲ
ಈ ಘಟನೆ ಬ್ಯಾಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಜಯನಗರ ಉಪವಿಭಾಗದ ಎಸಿಪಿ ಎಚ್ಎಸ್ ಗಜೇಂದ್ರ ಪ್ರಸಾದ್, ಮೇಟಗಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ್ ಭೇಟಿ ನೀಡಿದ್ದಾರೆ. ಐಪಿಸಿ ಸೆಕ್ಷನ್ 392 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.