ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತ ‘ಬಲರಾಮ’ ಇನ್ನಿಲ್ಲ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತ ಬಲರಾಮ(67) ಆನೆ ಭಾನುವಾರ ಸಂಜೆ ಕೊನೆಯುಸಿರೆಳೆದಿದೆ.
ತೀವ್ರ ಅನಾರೋಗ್ಯಕ್ಕೆ ಗುರಿಯಾಗಿದ್ದ ಬಲರಾಮ ನಾಗರಹೊಳೆ ಸಮೀಪದ ಭೀಮನಕಟ್ಟೆ ಆನೆ ಕ್ಯಾಂಪ್ ನಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಇತ್ತೀಚಿಗಿನ ದಿನಗಳಲ್ಲಿ ಅದು ದ್ರವರೂಪದ ಆಹಾರ ಮಾತ್ರ ಸೇವಿಸುತ್ತಿತ್ತು. ನಾಗರಹೊಳೆ ಪಶು ವೈದ್ಯ ಡಾ. ರಮೇಶ್ ನೇತೃತ್ವದ ವೈದ್ಯರ ತಂಡ ಬಲರಾಮನಿಗೆ ಚಿಕಿತ್ಸೆ ನೀಡುತ್ತಿತ್ತು. ಬಾಯಿ ಹುಣ್ಣಿನಿಂದ ಬಳಲುತ್ತಿದ್ದ ಬಲರಾಮ ದ್ರವರೂಪ ಆಹಾರ ಮಾತ್ರ ಸೇವಿಸುತ್ತಿತ್ತು. ಇತ್ತೀಚಿಗಿನ ಕೆಲವು ದಿನಗಳಲ್ಲಿ ಅದಕ್ಕೆ ನೀರು ಕುಡಿಯಲು ಕೂಡ ಸಾಧ್ಯವಾಗುತ್ತಿರಲಿಲ್ಲ. ತೀವ್ರ ಅನಾರೋಗ್ಯಕ್ಕೆ ತುತ್ತಾದ ಬಲರಾಮ ಭಾನುವಾರ ಸಂಜೆ ಸುಮಾರು 4.30ರ ವೇಳೆಗೆ ಇಹಲೋಕ ತ್ಯಜಿಸಿತು.

ಸೌಮ್ಯ ಸ್ವಭಾವದ ಬಲರಾಮನನ್ನು 1987ರಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಕಟ್ಟೆಪುರ ಅರಣ್ಯದಿಂದ ಹಿಡಿದು ತರಲಾಗಿತ್ತು. ನಂತರ ಅದಕ್ಕೆ 750 ಕೆಜಿ ಭಾರದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲು ತರಬೇತಿ ನೀಡಲಾಯಿತು. ಮೈಸೂರು ದಸರಾ ಮೆರವಣಿಗೆಯಲ್ಲಿ ಬಲರಾಮ 14 ಬಾರಿ ಅಂಬಾರಿ ಹೊತ್ತು ಸಾಗಿದ್ದಾನೆ.