ಮೈಸೂರು, (ಜುಲೈ. 28): ಹಸಿದವರಿಗೆ ತುತ್ತು ಅನ್ನ ನೀಡಿದಾಗ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದಾಗ ಸಿಗೋ ಸಂತೋಷ ಇನ್ನೊಂದಿಲ್ಲ. ಕಷ್ಟದಲ್ಲಿ ಇರುವವರ ಸಹಾಯಕ್ಕೆ ಧಾವಿಸಿ ನೆರವಾಗುವುದು ಮನುಷತ್ವ, ಮಾನವೀಯತೆ. ಆದ್ರೆ, ಇಲ್ಲೋರ್ವ ಆಟೋ ಚಾಲಕ , ಸಹಾಯಕ್ಕೆ ಹೋಗಿ ದುರಂತ ಅಂತ್ಯ ಕಂಡಿದ್ದಾನೆ. ಹೌದು…ಮೈಸೂರಿನಲ್ಲಿ ಕಾರು ಅಪಘಾತವಾಗಿರುವವರ ಸಹಾಯಕ್ಕೆ ಹೋಗಿದ್ದ ಆಟೋ ಚಾಲಕ ಪ್ರಾಣತೆತ್ತಿದ್ದಾನೆ. ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ಹಾಗೂ ಸಹಾಯ ಮಾಡಲು ಬಂದ ಆಟೋ ಚಾಲಕ ರವಿ ಮೃತಪಟ್ಟಿದ್ದಾರೆ. ಮೈಸೂರಿನ ಮಾನಂದವಾಡಿಯ ರಸ್ತೆಯ ಅಶೋಕಪುರಂನ ರೈಲ್ವೆ ವರ್ಕ್ ಶಾಪ್ ಬಳಿ ನಿನ್ನೆ (ಗುರುವಾರ) ತಡರಾತ್ರಿ ಈ ದುರ್ಘಟನೆ ನಡೆದಿದೆ. ಕಾರು ಚಾಲಾಯಿಸುತ್ತಿದ್ದ ಕಿರಣ್, ಹಾಗೂ ಸಹಾಯಕ್ಕೆ ಬಂದಿದ್ದ ಆಟೋ ಚಾಲಕ ರವಿ ಮೃತ ದುರ್ವೈವಿಗಳು.
ಘಟನೆ ಹಿನ್ನೆಲೆ
ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಸಹೋದರಿಯ ಮಗ ದೀರಜ್ ಪ್ರಸಾದ್ಗೆ ಸೇರಿದ ಕಾರು ಅಶೋಕಪುರಂನ ರೈಲ್ವೆ ವರ್ಕ್ ಶಾಪ್ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಬಳಿಕ ಅಪಘಾತವಾದ ಸ್ಥಳದಿಂದ ಕಾರನ್ನು ತಳ್ಳಲು ಕಾರಿನಲ್ಲಿದ್ದ ನಾಲ್ವರು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಅಲ್ಲೇ ಇದ್ದ ಆಟೋ ಚಾಲಕ ರವಿನನ್ನು ಸಹಾಯಕ್ಕೆ ಬರುವಂತೆ ಕರೆದಿದ್ದಾರೆ. ಅದರಂತೆ ರವಿ ನೆರವಿಗೆ ಧಾವಿಸಿದ್ದು, ಎಲ್ಲರೂ ಸೇರಿ ತಳ್ಳುವಾಗ ಕಾರಿನಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಪರಿಣಾಮ ಕಾರು ಚಾಲನೆ ಮಾಡುತ್ತಿದ್ದ ಕಿರಣ್ ಹಾಗೂ ಸಹಾಯಕ್ಕೆ ಬಂದಿದ್ದ ಆಟೋ ಚಾಲಕ ರವಿ ಸಾವನ್ನಪ್ಪಿದ್ದಾರೆ.
ಮನೆಯಲ್ಲಿ ಕಾರು ನಿಲ್ಲಿಸುವಂತೆ ದೀರಜ್, ಚಾಲಕನಿಗೆ ತಿಳಿಸಿದ್ದಾರೆ. ಆದ್ರೆ, ಚಾಲಕ ಸ್ನೇಹಿತನ ಜೊತೆ ಕಾರಿನಲ್ಲಿ ಸುತ್ತಾಟಕ್ಕೆ ಹೋಗಿದ್ದಾರೆ. ಈ ವೇಳೆ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕಷ್ಟದಲ್ಲಿದ್ದವರ ನೆರವಿಗೆ ಧಾವಿದ ಆಟೋ ಚಾಲಕನ ಸಾವು ನಿಜಕ್ಕೂ ದುರಂತ. ಇನ್ನು ಮಾಲೀಕ ಹೇಳಿದಂತೆ ಚಾಲಕ ಕಾರನ್ನು ಮನೆಯಲ್ಲಿ ಪಾರ್ಕ್ ಮಾಡಿದ್ದರೆ ಯಾವುದೇ ಅನಾಹುತ ಸಂಭವಿಸುತ್ತಿರಲಿಲ್ಲ. ಆದ್ರೆ, ವಿಧಿಯಾಟ ಬಲ್ಲವರು ಯಾರು ಅಲ್ವಾ…