ಬಿಳಕಿ ಸಮೀಪದ ಬಸವನಗುಂಡಿ ಬಳಿ ಕಾಣಿಸಿಕೊಂಡ ಕಾಳಿಂಗ ಸರ್ಪ

ಯಲ್ಲಾಪುರ: ತಾಲೂಕಿನ ಬಿಳಕಿ ಸಮೀಪದ ಬಸವನಗುಂಡಿ ಬಳಿ ಕಾಣಿಸಿಕೊಂಡ ಕಾಳಿಂಗ ಸರ್ಪವೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.
ಬಿಳಕಿ ಬಳಿಯ ಬಸವನಗುಂಡಿ ಗ್ರಾಮದಲ್ಲಿ ಹೊಲದ ಪಕ್ಕದಲ್ಲಿ ಒಣಗಿದ ಮರದ ಪೊಟರೆಯೊಂದರಲ್ಲಿ ಕಳೆದ 15 ದಿವಸಗಳಿಂದ ಕಾಳಿಂಗ ಸರ್ಪ ವಾಸವಾಗಿತ್ತು. ಸ್ಥಳೀಯ ರೈತರು ಹೊಲದತ್ತ ಹೋಗಲು ಭಯಪಡುವಂತಾಗಿತ್ತು.
ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಶಿರಸಿಯ ಉರಗಪ್ರೇಮಿ ಮಾಸೈಯ್ಯದ್ ಅವರನ್ನು ಕರೆಸಿ, ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.
ಡಿಸಿಎಫ್ ಎಸ್.ಜಿ.ಹೆಗಡೆ, ಎಸಿಎಫ್ ಹಿಮವತಿ ಭಟ್ಟ ಅವರ ಮಾರ್ಗದರ್ಶನದಲ್ಲಿ ಆರ್.ಎಫ್.ಒಗಳಾದ ಅಮಿತ್ ಚೌಹಾಣ, ಶಿಲ್ಪಾ ನಾಯ್ಕ, ಡಿ.ಆರ್.ಎಫ್.ಒ ಮಂಜುನಾಥ ಆಗೇರ, ಅರಣ್ಯ ರಕ್ಷಕರಾದ ಗಣೇಶ ಪವಾರ, ವನ್ಯಜೀವಿ ಸಂಶೋಧನಾ ತಂಡದ ರವಿ ಯಲ್ಲಾಪುರ, ಅಜಿಂಕ್ಯಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.