ಬೆಂಗಳೂರು: ಶಿವಮೊಗ್ಗದಲ್ಲಿ ಇತ್ತೀಚೆಗೆ ನೂತನವಾಗಿ ನಿರ್ಮಾಣಗೊಂಡು ಉದ್ಘಾಟನೆಯಾಗಿರುವ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರ ಆರಂಭಕ್ಕೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಆಗಸ್ಟ್ 11 ರಂದು ವಿಮಾನ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಈ ಹಿಂದೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಹೇಳಿದ್ದರು. ಆದರೆ, ಇದೀಗ ಆಗಸ್ಟ್ 31ರಿಂದ ಬೆಂಗಳೂರು ಶಿವಮೊಗ್ಗ ಮಧ್ಯೆ ವಿಮಾನ ಸಂಚಾರ ಆರಂಭವಾಗುವ ಬಗ್ಗೆ ಮಾಹಿತಿ ದೊರೆತಿದೆ. ಈ ವಿಚಾರವಾಗಿ ಇಂಡಿಗೊ ವಿಮಾನಯಾನ ಸಂಸ್ಥೆಯ ವೆಬ್ಸೈಟ್ನಲ್ಲೂ ಮಾಹಿತಿ ನೀಡಲಾಗಿದೆ.
ಬೆಂಗಳೂರಿನಿಂದ ಬೆಳಗ್ಗೆ 9.50ಕ್ಕೆ ಹೊರಡಲಿರುವ ವಿಮಾನ 11.05ಕ್ಕೆ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ 11.25ಕ್ಕೆ ಹೊಡಲಿರುವ ವಿಮಾನ 12.25ಕ್ಕೆ ಬೆಂಗಳೂರು ತಲುಪಲಿದೆ ಎಂದು ಇಂಡಿಗೊ ವಿಮಾನಯಾನ ಸಂಸ್ಥೆಯ ಟಿಕೆಟ್ ಬುಕಿಂಗ್ ವಿಂಡೋದಲ್ಲಿರುವ ಮಾಹಿತಿಯಿಂದ ತಿಳಿದುಬಂದಿದೆ.
ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ಶಿವಮೊಗ್ಗಕ್ಕೆ ವಿಮಾನದಲ್ಲಿ ಬಂದಿಳಿದಿದ್ದಲ್ಲದೆ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದ್ದರು. ಶಿವಮೊಗ್ಗದಿಂದ 4 ಮಾರ್ಗಗಳಲ್ಲಿ ವಿಮಾನ ಹಾರಾಟಕ್ಕೆ ಅನುಮತಿ ದೊರೆತಿದೆ ಎಂದು ಹೇಳಲಾಗಿದ್ದರೂ ಸದ್ಯ ಶಿವಮೊಗ್ಗ ಬೆಂಗಳೂರು ಮಧ್ಯೆ ಮೊದಲಿಗೆ ವಿಮಾನ ಹಾರಾಟ ಆರಂಭವಾಗಲಿದೆ. ಆ ನಂತರ ಉಳಿದ ಮಾರ್ಗಗಳಲ್ಲಿಯೂ ಹಾರಾಟ ಆರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಶಿವಮೊಗ್ಗ ವಿಮಾನ ನಿಲ್ದಾಣ ಸೋಗಾನೆ ಬಳಿ ನಿರ್ಮಾಣವಾಗಿದೆ. ಇದರ ರನ್ ವೇ ಸುಮಾರು 3110 ಮೀಟರ್ ಉದ್ದ, 45 ಮೀಟರ್ ಅಗಲ ಇದೆ. ಸುಮಾರು 220 ಕೋಟಿ ರೂ. ವೆಚ್ಚದಲ್ಲಿ 662.38 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಉಡಾನ್ ಯೋಜನೆಯಡಿ ಈ ನಿಲ್ದಾಣ ಸಾಕಾರಗೊಂಡಿದೆ.