ಓದಿನಿಂದ ಮಾತ್ರ ಜ್ಞಾನ ಮತ್ತು ಕೌಶಲ್ಯಗಳ ವಿಕಾಸ ಸಾಧ್ಯ :ಡಾ. ಬಸವರಾಜ ಎನ್. ಅಕ್ಕಿ

ದಾಂಡೇಲಿ : ಗ್ರಂಥಾಲಯದಲ್ಲಿರುವ ಎಲ್ಲಾ ವಿಷಯಗಳ ಗ್ರಂಥಗಳನ್ನು ಅಧ್ಯಯನ ಮಾಡುವುದರಿಂದ ಜ್ಞಾನ ಮತ್ತು ಕೌಶಲ್ಯಗಳು ವಿಕಾಸವಾಗುತ್ತವೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಭಾಷಾ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಡಾ. ಬಸವರಾಜ ಎನ್. ಅಕ್ಕಿಯವರು ಅಭಿಪ್ರಾಯಪಟ್ಟರು.

ಅವರು ನಗರದ ಅಂಬೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಕೃತಿಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಸಾಮಾರ್ಥ್ಯ ಸಾರಥ್ಯ ಯೋಜನೆಯಡಿಯಲ್ಲಿ ಮಹಾವಿದ್ಯಾಲಯಕ್ಕೆ ಇತಿಹಾಸ, ರಾಜ್ಯಶಾಸ್ತ್ರ ಅರ್ಥಶಾಸ್ತ್ರ, ವಿಜ್ಞಾನ, ಕನ್ನಡ, ಸಂಸ್ಕ್ರತಿ, ಸಾಮಾನ್ಯ ಜ್ಞಾನ, ಭೂಗೋಳ ಶಾಸ್ತ್ರ ಮುಂತಾದ ವಿಷಯಗಳ 225 ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಹಮ್ಮಿಕೊಂಡ ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಡಾ. ಎಂ. ಡಿ. ಒಕ್ಕುಂದ ಅವರು ಪಠ್ಯ ಪುಸ್ತಕಗಳನ್ನು ಹೊರತು ಪಡಿಸಿ ಸಾಹಿತ್ಯ ಮಾಲಿಕೆಗಳು, ಹಾಗೂ ವಿಜ್ಞಾನ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಕೃತಿಗಳನ್ನು ಅಧ್ಯಯನ ಮಾಡುವುದರಿಂದ ಸಮಗ್ರ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗುತ್ತದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಂಥಪಾಲಕರಾದ ಗೀತಾ ಕೋಟೆನ್ನವರ ಅವರು ಕಾರ್ಯಕ್ರಮದ ಆಶಯವನ್ನು ವಿವರಿಸಿ ಸ್ವಾಗತಿಸಿದರು. ಡಾ. ಡಾ. ನಾಸೀರ ಅಹ್ಮದ ಜಂಗೂಭಾಯಿ ವಂದಿಸಿದರು. ಡಾ. ಮಂಜುನಾಥ ಚಲವಾದಿ ನಿರೂಪಿಸಿದರು. ಸಮಾರಂಭದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.