ಭಟ್ಕಳ: ನಾಯಿ ದಾಳಿ ಹಿನ್ನೆಲೆ ತೋಟದ ಬಾವಿಯೊಂದಕ್ಕೆ ಬಿದ್ದ ಜಿಂಕೆಯೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಗೊಂಡರಕೇರಿ ಕಿತ್ರೆ ದೇವಿಮನೆ ರಸ್ತೆ ಬಳಿ ನಡೆದಿದೆ.
ಕಿತ್ರೆ ದೇವಿಮನೆ ಗೊಂಡರಕೇರಿ ಮಂಗಳಾ ಗೊಂಡ ಎನ್ನುವವರ ತೋಟದಲ್ಲಿ ನಾಯಿಗಳು ದಾಳಿಗೆ ಬೆದರಿದ ಜಿಂಕೆಯೆಂದು ಸುಮಾರು 25 ಅಡಿ ಆಳದ ಬಾವಿಯಲ್ಲಿ ಬಿದ್ದಿರುವ ಬಗ್ಗೆ ಡಿ.ಆರ್.ಆಫ್.ಓ ಸಂದೀಪ ಭಂಢಾರಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಜಿಂಕೆಯನ್ನು ಸುರಕ್ಷಿತವಾಗಿ ಮೇಲಕ್ಕೆ ತಂದು ರಕ್ಷಣೆ ಮಾಡಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ರಮೇಶ ಹಾಗೂ ಸಿಬ್ಬಂದಿಗಳಾದ ಕುಮಾರ ನಾಯ್ಕ, ಪುರುಷೋತ್ತಮ ನಾಯ್ಕ, ಅಗ್ನಿಶಾಮಕ ಚಾಲಕರಾದ ಶಿವಪ್ರಸಾದ ನಾಯ್ಕ ಹಾಗೂ ಅರಣ್ಯಾಧಿಕಾರಿ ಸಂದೀಪ ಭಂಢಾರಿ ಹಾಗೂ ತಂಡದವರು ಉಪಸ್ಥಿತರಿದ್ದರು