ದಾಂಡೇಲಿ: ನಗರದ ಬರ್ಚಿ ರಸ್ತೆಯಲ್ಲಿರುವ ದಾಂಡೇಲಿ ಕೇಂದ್ರ ಅಂಚೆ ಕಚೇರಿಯು ಸತತ ಮಳೆಯಿಂದ ಸೋರುತ್ತಿದ್ದು, ಸಿಬ್ಬಂದಿಗಳು ಆತಂಕದಲ್ಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಮೊದಲ ಮಹಡಿಯಲ್ಲಿರುವ ಕಚೇರಿಯ ಮೇಲ್ಚಾವಣಿ ಮೇಲ್ಮೈ ಪದರು ಅಲ್ಲಿ ಇಲ್ಲಿ ಕಿತ್ತು ಹೋಗಿರುವುದರಿಂದ ಸೋರುತ್ತಿದೆ. ಇದರಿಂದ ಕಂಪ್ಯೂಟರ್ ಸೇರಿದಂತೆ ಅಗತ್ಯ ದಾಖಲೆಗಳನ್ನು ರಕ್ಷಿಸುವುದು ಸಿಬ್ಬಂದಿಗಳಿಗೆ ಕಷ್ಟವಾಗಿದೆ. 25ಕ್ಕೂ ಹೆಚ್ಚು ಸಿಬ್ಬಂದಿಗಳಿರುವ ಕಚೇರಿಯಲ್ಲಿ ಇದೀಗ ತಮ್ಮ ನಿಗದಿತ ಜಾಗ ಬಿಟ್ಟು ಟೇಬಲ್ ಸ್ಥಳಾಂತರಿಸಿ ನೀರು ಬೀಳದಿರುವ ಜಾಗ ಹುಡುಕಿ ಕೆಲಸ ಮಾಡುವ ಸ್ಥಿತಿ ಇಲ್ಲಿ ಸಧ್ಯಕ್ಕೆ ಕಂಡುಬರುತ್ತಿದೆ.
ಸತತವಾಗಿ ನಾಲ್ಕು ವರ್ಷಗಳಿಂದ ಇದೇ ಪರಿಸ್ಥಿತಿಯನ್ನು ಅಂಚೆ ಕಚೇರಿಯು ಎದುರಿಸುತ್ತಿದ್ದು, ಈ ಬಗ್ಗೆ ಇಲಾಖೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದರೆ, ಯಾವುದೇ ಉತ್ತರ ಬಂದಿಲ್ಲ. ಈ ರೀತಿಯಾದರೆ ಸಾರ್ವಜನಿಕ ಸೇವೆ ನೀಡುವುದು ಕಷ್ಟವಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ ತಮ್ಮ ಅಳಲನ್ನು ತೋಡಿಕೊಂಡರು.
ಅಂಚೆ ಬ್ಯಾಂಕಿಂಗ್, ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ, ವಿಮಾ ಯೋಜನೆ, ವೃದ್ಧಾಪ್ಯ ವೇತನ, ಪತ್ರ ವ್ಯವಹಾರ ಸೇರಿದಂತೆ ಮೊದಲಾದ ಯೋಜನೆಗಳ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಸಿಬ್ಬಂದಿಗಳಿಗೆ ಬಿಡುವಿಲ್ಲದ ಕೆಲಸ. ಸಾರ್ವಜನಿಕ ಕೌಂಟರ್ ನ ಮೇಲೆಯೇ ಮಳೆ ನೀರು ಸೋರುತಿರುವ ಕಾರಣ ಸಾರ್ವಜನಿಕರು ತಂದ ದಾಖಲೆ ಪತ್ರಗಳು ಸಹ ನೀರು ಬಿದ್ದು ಹಾಳಾಗುತ್ತಿವೆ.
ಕಂಪ್ಯೂಟರ್ ಇಟ್ಟ ಜಾಗದಲ್ಲಿ ಸೋರುತ್ತಿರುವ ಕಾರಣ ಕರೆಂಟ್ ಶಾಕ್ ತಗುಲುವ ಭಯದಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ದಾಂಡೇಲಿ ಅಂಚೆ ಕಚೇರಿಯು ಕಾರವಾರ ವಲಯ ವ್ಯಾಪ್ತಿಯಲಿದ್ದು, ಪೋಸ್ಟ್ ಆಫೀಸ್ ಜನರಲ್ ಇವರ ಆದೇಶದ ಮೇರೆಗೆ ಕಾರವಾರದ ಸಹಾಯಕ ಎಂಜಿನಿಯರ್ ಅಂಚೆ ಕಚೇರಿ ಮೇಲ್ಚಾವಣಿಯನ್ನು ಹಾಗೂ ಇತರೆ ದುರಸ್ತಿ ಕಾರ್ಯ ಮಾಡುವ ನಿಟ್ಟಿನಲ್ಲಿ ಪರಿಶೀಲನೆಗೆ ಸೂಚನೆ ನೀಡಿದ್ದಾರೆ. ಕಟ್ಟಡ ಬಾಳಿಕೆ ಹಾಗೂ ಗುಣಮಟ್ಟದ ಪರೀಕ್ಷೆ ನಡೆಸಿದ ವರದಿ ನೀಡಿದ ನಂತರ ಕಾಮಗಾರಿಯನ್ನು ಈ ವರ್ಷದ ಕೊನೆಯಲ್ಲಿ ಆರಂಭ ಮಾಡಲಿದ್ದಾರೆ ಎಂದು ಅಂಚೆ ಕಚೇರಿಯ ಅಂಚೆ ನಿರೀಕ್ಷಕರಾದ ಶಿವಾನಂದ ದೊಡ್ಡಮನಿ ತಿಳಿಸಿದ್ದಾರೆ.