ಕುಮಟಾ : “ವಿದ್ಯಾರ್ಥಿಗಳು ಮಾಡಿದ ಸಾಧನೆ ಜಗತ್ತಿಗೆ ತಿಳಿದರೆ, ಆ ಸಾಧನೆಗೆ ಕಾರಣರಾದ ಶಿಕ್ಷಕರು ಮಾತ್ರ ತೆರೆಮರೆಯಲ್ಲಿಯೇ ಇದ್ದು ಬಿಡುತ್ತಾರೆ. ಅಂತಹ ಶಿಕ್ಷಕರಿಗೆ ನನ್ನದೊಂದು ಸೆಲ್ಯೂಟ್..” ಎಂದು ಮಾದನಗೇರಿಯ ಶ್ರೀ ಮಹಾಲಸಾ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ಸುನಿಲ್ ಪೈ ಹೇಳಿದರು. ಅವರು ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿವಿಎಸ್‌ಕೆ ಪ್ರೌಢಶಾಲೆಯ ನವೀಕೃತ ಕಂಪ್ಯೂಟರ್ ಲ್ಯಾಬ್ ಹಾಗೂ ೨೦೨೩-೨೪ನೇ ಸಾಲಿನ ಎಟಿಎಲ್ ಲ್ಯಾಬ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಆಟೋಟದ ಜೊತೆಗೆ ತಂತ್ರಜ್ಞಾನದ ಅರಿವು ಮಕ್ಕಳಿಗೆ ಅತ್ಯಗತ್ಯ. ಲ್ಯಾಬ್‌ನ ಪ್ರಯೋಜನ ಮಕ್ಕಳು ಪಡೆಯುವಂತಾಗಲಿ. ಲ್ಯಾಬ್‌ನ ನವೀಕರಣಕ್ಕಾಗಿ ದೇಣಿಗೆ ನೀಡಿದ ಏಳು ಲಕ್ಷ ರೂ.ಗಳು ಶ್ರೀ ದೇವರ ಅನುಗ್ರಹ, ನಾವು ನೆಪ ಮಾತ್ರ ಎಂದರು. ಮಕ್ಕಳು ಸಾಧನೆ ಮಾಡಿದಾಗ ಬೀದಿ-ಬೀದಿಗಳಲ್ಲಿ ಪ್ರದರ್ಶನದ ಮೂಲಕ ಶಾಲೆಯ ಹೆಸರನ್ನು ವೈಭವೀಕರಿಸಿ ಬೇಳೆ ಬೇಯಿಸಿಕೊಳ್ಳುವ ಇತರೆ ಹಲವು ಶಾಲೆಗಳ ಹೋಲಿಕೆಗೆ ಕೊಂಕಣ ಸಂಸ್ಥೆಯು ಭಿನ್ನವಾಗಿದೆ. ಆಡಂಬರದ ಪ್ರಚಾರಗಳಿಗೆ ಬೆಲೆಕೊಡದೆ, ಮಕ್ಕಳಿಗೆ ಸಂಸ್ಕಾರಯುತ ಸಾತ್ವಿಕ ಗುಣಮಟ್ಟದ ಶಿಕ್ಷಣ ಕೊಡಮಾಡುತ್ತ ರಾಜ್ಯಮಟ್ಟದ ರ‍್ಯಾಂಕ್‌ಗಳನ್ನು ಸತತವಾಗಿ ತನ್ನದಾಗಿಸಿಕೊಳ್ಳುತ್ತಿರುವುದು ನಮ್ಮ ಜಿಲ್ಲೆಗೇ ಹೆಮ್ಮೆಯ ವಿಷಯ ಎಂದರು.
ಅತಿಥಿಗಳಾಗಿ ಆಗಮಿಸಿದ ದೇವಸ್ಥಾನದ ಖಜಾಂಚಿ ವಿದ್ಯಾಧರ ಪೈ ಮಾತನಾಡಿ, ಬದಲಾವಣೆ ಜಗತ್ತಿನ ನಿಯಮ. ಬದಲಾವಣೆಗೆ ನಾವು ಒಗ್ಗಬೇಕು. ತಂತ್ರಜ್ಞಾನ ಪ್ರತಿಯೊಂದು ಕ್ಷೇತ್ರವನ್ನು ಆವರಿಸಿದೆ. ಅದರ ಅಧ್ಯಯನವು ಹೊಸ ಅವಕಾಶಗಳ ಮಾರ್ಗ ತೆರೆದು ಸಾಧನೆಗೆ ಪೂರಕವಾಗಬಲ್ಲದು. ಅದು ಇಂದಿನ ಯುಗಕ್ಕೆ ಅವಶ್ಯಕವೂ ಹೌದು. ಎಲ್ಲರಿಗೂ ಶುಭವಾಗಲಿ ಎಂದರು. ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಂಕಣ ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ನಾಯಕ ಮಾತನಾಡಿ, ೨೧ನೇ ಶತಮಾನವು ಸಂಪೂರ್ಣವಾಗಿ ವಿಜ್ಞಾನ-ತಂತ್ರಜ್ಞಾನವನ್ನು ಆಧರಿಸಿದ್ದಾಗಿದೆ. ಸಾಧನೆಗೆ ಹಂಬಲಿಸುವ ಪ್ರತಿಯೊಬ್ಬರಲ್ಲೂ ಅದರ ಕೌಶಲ್ಯ ಇರಬೇಕಾಗುತ್ತದೆ. ನಮ್ಮ ಸಂಸ್ಥೆ ಆರಂಭದಿಂದಲೂ ಕಂಪ್ಯೂಟರ್ ಜ್ಞಾನಕ್ಕೆ ಒತ್ತು ನೀಡುತ್ತಿದ್ದು, ವರ್ಷದಿಂದ ವರ್ಷಕ್ಕೆ ವ್ಯವಸ್ಥೆಯನ್ನು ಉನ್ನತೀಕರಿಸುವ ಕರ‍್ಯವನ್ನು ಸಂಸ್ಥೆ ಹಾಗೂ ದಾನಿಗಳ ಸಹಾಯದಿಂದ ನೆರವೇರಿಸುತ್ತಿದ್ದೇವೆ. ದಾನಿಗಳಿಗೆ ದೇವರು ಆಯುರಾರೋಗ್ಯ ಸಂಪದ ದಯಪಾಲಿಸಲಿ ಎಂದು ಹಾರೈಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸ್ಥೆಯ ಕರ‍್ಯದರ್ಶಿ ಮುರಲೀಧರ ಪ್ರಭು, ದೇವರ ಕೃಪಾಶೀರ್ವಾದ ಎಲ್ಲರ ಮೇಲೂ ಇದ್ದೇ ಇರುತ್ತದೆ. ಆದರೆ, ಕಾಯಕ ಮಾಡದೆ ದೇವರು ಕೊಡುತ್ತಾನೆಂದು ಕುಳಿತರೆ ಸಾಧ್ಯವಿಲ್ಲ. ಶ್ರಮ ಪಟ್ಟರೆ ದೇವರು ಅಭಯನಾಗಿರುತ್ತಾನೆ. ಶಾಲೆಗೆ ಕಂಪ್ಯೂಟರ್ ಲ್ಯಾಬ್‌ನ ನವೀಕರಣದ ಅಗತ್ಯತೆಯ ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಏಳು ಲಕ್ಷಗಳ ಚೆಕ್‌ನ್ನು ದೇಣಿಗೆ ನೀಡಿ ನಮ್ಮ ಯೋಜನೆಯನ್ನು ಸಾಕಾರಗೊಳಿಸಿದ ಪೈರವರಿಗೆ ಕೃತಜ್ಞತೆಗಳು ಎಂದರು.
ಈ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ರವೀಂದ್ರ ಕಿಣ , ಅಮಿತಾ ಗೋವೆಕರ್, ಜ್ಯೋತಿ ಪಟಗಾರ, ಪೂರ್ಣಿಮಾ ಶಾನಭಾಗ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ದಿಶಾ ಡಿ. ನಾಯ್ಕ ಮತ್ತು ಸಿಂಚನಾ ಜಿ. ಭಟ್ಟ ಇವರ ಕಂಪ್ಯೂಟರ್ ಬೇಸಿಕ್ಸ್, ಪಾವನಿ ನಾಯ್ಕ ಇವಳ ಚಂದ್ರಯಾನ-೩ ಕುರಿತಾದ ಪಿಪಿಟಿ, ಅಥರ್ವ ಬಾಳಗಿ, ಧ್ರುವ ನಾಯ್ಕ ಮತ್ತು ಅನಿರುದ್ಧ ಇವರ ಎನಿಮೇಶನ್ ಪ್ರಾತ್ಯಕ್ಷಿಕೆ ಮನಸೂರೆಗೊಂಡವು. ಉನ್ನತಿ ನಾಯ್ಕ ಇವಳ ಭರತನಾಟ್ಯ, ಕರ‍್ಯಕ್ರಮದ ಪ್ರಾರಂಭಕ್ಕೆ ಮೆರಗು ನೀಡಿತು.
೨೦೨೩-೨೪ ನೇ ಸಾಲಿನ ಎಟಿಎಲ್ ಲ್ಯಾಬ್ ಚಟುವಟಿಕೆಗಳಿಗೂ ಚಾಲನೆ ನೀಡಲಾಯಿತು.
ಹಿರಿಯ ವಿಶ್ವಸ್ಥ ರಮೇಶ ಪ್ರಭು ಸ್ವಾಗತಿಸಿದರು, ಮುಖ್ಯಾಧ್ಯಾಪಕಿ ಸುಮಾ ಪ್ರಭು ವಂದಿಸಿದರು, ಪ್ರಜ್ಞಾ ಭಟ್ಟ ಮತ್ತು ವೈಷ್ಣವಿ ಹೆಗಡೆ ನಿರೂಪಿಸಿದರು. ಜಂಟಿ ಕರ‍್ಯದರ್ಶಿ ಶೇಷಗಿರಿ ಶಾನಭಾಗ, ರಾಮಕೃಷ್ಣ ಗೋಳಿ, ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ, ಅಂಗ ಸಂಸ್ಥೆಗಳ ಮುಖ್ಯಾಧ್ಯಾಪಕಿಯರಾದ ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ, ಪ್ರಾಚಾರ್ಯ ಕಿರಣ ಭಟ್ಟ, ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ ಉಪಸ್ಥಿತರಿದ್ದರು.